ದಲಿತ ಬಾಲಕಿಯ ಅತ್ಯಾಚಾರ,ಕೊಲೆ ಪ್ರಕರಣ : ಡಿ.23ಕ್ಕೆ ವಿಜಯಪುರ ಬಂದ್ ಕರೆ
ಪೊಲೀಸರಿಂದ ನಾಲ್ಕು ಮಂದಿಯ ವಿಚಾರಣೆ

ಬೆಂಗಳೂರು, ಡಿ. 21: ವಿಜಯಪುರದ ದಲಿತ ಬಾಲಕಿಯ ಅತ್ಯಾಚಾರ-ಕೊಲೆಗೈದ ಪ್ರಕರಣದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ, ಗಲ್ಲು ಶಿಕ್ಷೆ ಕೊಡಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ರಸ್ತೆ ತಡೆ, ಧರಣಿ, ಪ್ರತಿಭಟನೆಗಳು ನಡೆಯುತ್ತಿದ್ದು, ಡಿ.23ಕ್ಕೆ(ಶನಿವಾರ) ವಿವಿಧ ಸಂಘಟನೆಗಳು ‘ವಿಜಯಪುರ ಬಂದ್’ ಕರೆ ನೀಡಿವೆ.
ಈ ಮಧ್ಯೆ ಪ್ರಕರಣದ ಪ್ರಮುಖ ಆರೋಪಿ ದೀಪಕ್ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ವಹಿಸಿದ್ದು, ಗುರುವಾರ ಸಿಐಡಿ ಅಧಿಕಾರಿಗಳ ತಂಡ ವಿಜಯಪುರಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ.
ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂಬಂಧ ಸಂಶಯದ ಮೇಲೆ ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಆರೋಪಿಗಳ ಬಗ್ಗೆ ಯಾವುದೇ ಖಚಿತ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದು ಆದರ್ಶನಗರ ಪೊಲೀಸ್ ಠಾಣೆ ಪಿಎಸ್ಸೈ ಪಾಟೀಲ್ ಹೇಳಿದ್ದಾರೆ.
ಈ ಬೆಳವಣಿಗೆಗಳ ನಡುವೆಯೇ ಕೆಲ ಆರೋಪಿಗಳ ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆರೋಪಿಗಳ ಬಂಧನಕ್ಕೂ ವ್ಯಾಪಕ ಒತ್ತಾಯ ಕೇಳಿಬಂದಿದೆ. ಅಲ್ಲದೆ, ಆರೋಪಿಗಳನ್ನು ಗಲ್ಲಿಗೇರಿಸಬೇಕು. ಆ ಮೂಲಕ ಮೃತ ಬಾಲಕಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂಬ ಆಗ್ರಹಿಸಲಾಗಿದೆ.
ಮುದ್ದೇಬಿಹಾಳ ಬಂದ್ ಯಶಸ್ವಿ: ದಲಿತ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ದಲಿತ, ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಮುದ್ದೇಬಿಹಾಳ ಬಂದ್ ಯಶಸ್ವಿಯಾಗಿದೆ. ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರು ಬಂದ್‌ಗೆ ಬೆಂಬಲ ಸೂಚಿಸಿದರು.
ಪ್ರತಿಭಟನಾಕಾರರು ಬೆಳಗ್ಗೆ 6ಗಂಟೆಯಿಂದಲೇ ಘಟನೆಯನ್ನು ಖಂಡಿಸಿ ಅಂಗಡಿ- ಮುಂಗಟ್ಟುಗಳನ್ನು ತೆರೆಯದಂತೆ ಮನವಿ ಮಾಡಿದರು. ಹೀಗಾಗಿ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲಿಸಿದರು. ಪಟ್ಟಣದ ಬಸವೇಶ್ವರ ವೃತ್ತ, ತಂಗಡಗಿ ರಸ್ತೆ, ಅಂಬೇಡ್ಕರ್ ವೃತ್ತ, ಆಲಮಟ್ಟಿ ರಸ್ತೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಟೈಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.
ಬಂದ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಅಘೋಷಿತ ರಜೆ ನೀಡಲಾಗಿತ್ತು. ಮಾರುಕಟ್ಟೆ, ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆಟೊರಿಕ್ಷಾ, ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಮುನ್ನಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಆರೋಪಿಗಳ ಪರ ವಕಾವತ್ತು ವಹಿಸಲ್ಲ
‘ದಲಿತ ಬಾಲಕಿಯ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿಗಳ ಪರ ವಿಜಯಪುರದ ವಕೀಲರು ವಕಾಲತ್ತು ವಹಿಸುವುದಿಲ್ಲ. ಈ ಕೃತ್ಯ ಅಮಾನವೀಯ, ಅನಾಗರಿಕ. ಹೀಗಾಗಿ ವಿಜಯಪುರ ಬಾರ್ ಅಸೋಸಿಯೇಷನ್ ತೀರ್ಮಾನ ಕೈಗೊಂಡಿದೆ’
-ಈರಣ್ಣ ಗಾಳಿ ಬಾರ್ ಅಸೋಸಿಯೇಷನ್ ಅಧ್ಯಕ್ಷ
ಉನ್ನತ ಮಟ್ಟದ ತನಿಖೆಗೆ ಆಗ್ರಹ
‘ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷಾ ವರದಿ ಬರುವ ಮೊದಲೆ ಎಸ್ಪಿ ಈ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪ್ರಕರಣ ಮುಚ್ಚಿ ಹಾಕಲು ಪೊಲೀಸ್ ಅಧಿಕಾರಿಗಳು ಹುನ್ನಾರ ನಡೆಸಿರುವ ಸಂಶಯವಿದೆ. ಆದುದರಿಂದ ಪ್ರಕರಣದ ತನಿಖೆಗೆ ಉನ್ನತ ಅಧಿಕಾರಿಗಳ ತಂಡ ರಚಿಸಬೇಕು’
-ಭಾಸ್ಕರ್ ಪ್ರಸಾದ್ ದಲಿತ ಮುಖಂಡ
‘ದಲಿತ ಬಾಲಕಿಯ ಮೇಲಿನ ಪೈಚಾಚಿಕ ಕೃತ್ಯವನ್ನು ಬಿಜೆಪಿ ನಾಯಕರು ತಮ್ಮ ವೈಯಕ್ತಿಕ ರಾಜಕೀಯಕ್ಕಾಗಿ ಪ್ರಕರಣ ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಇದಕ್ಕೆ ದಲಿತರು ಅವಕಾಶ ನೀಡುವುದಿಲ್ಲ. ಇದರಿಂದ ತನಿಖೆ ವಿಳಂಬವಾಗಲಿದ್ದು, ಸಾಕ್ಷ ನಾಶವಾಗುವ ಸಂಭವವಿದೆ’
-ಚಂದ್ರಶೇಖರ ಕೊಡಬಾಗಿ ಹಿರಿಯದಲಿತ ಮುಖಂಡ







