2ಜಿ ಹಗರಣ: ಸಾಕ್ಷಿಗಾಗಿ 7 ವರ್ಷ ಕಾದರೂ ಪ್ರಯೋಜನವಾಗಲಿಲ್ಲ; ನ್ಯಾ. ಒಪಿ ಸೈನಿ

ಹೊಸದಿಲ್ಲಿ, ಡಿ.21: 2ಜಿ ಹಗರಣದ ಆರೋಪಿಗಳಾದ ಮಾಜಿ ದೂರಸಂಪರ್ಕ ಸಚಿವ ಎ ರಾಜಾ ಮತ್ತು ಡಿಎಂಕೆ ಮುಖ್ಯಸ್ಥ ಕರುಣಾನಿಧಿಯವರ ಪುತ್ರಿ ಕನಿಮೊಳಿ ಸೇರಿದಂತೆ ಎಲ್ಲಾ ಹದಿನೇಳು ಆರೋಪಿಗಳನ್ನು ಖುಲಾಸೆಗೊಳಿಸಿರುವ ದೆಹಲಿಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು, ಈ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ಒಪ್ಪುವಂಥ ಯಾವುದಾದರೂ ಸಾಕ್ಷಿಗಳು ದೊರಕಬಹುದೇ ಎಂದು ಏಳು ವರ್ಷಗಳ ಕಾಲ ಕಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದ್ದಾರೆ.
"ಕಳೆದ ಏಳು ವರ್ಷಗಳಲ್ಲಿ ಬೇಸಿಗೆ ರಜೆಯನ್ನೂ ಸೇರಿಸಿ ಕೆಲಸದ ಎಲ್ಲಾ ದಿನಗಳಲ್ಲೂ ನಾನು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ನ್ಯಾಯಾಲಯದಲ್ಲಿ ಕುಳಿತು 2ಜಿ ಹಗರಣ ಪ್ರಕರಣದಲ್ಲಿ ಯಾವುದಾದರೂ ಕಾನೂನಾತ್ಮಕವಾಗಿ ಒಪ್ಪಬಹುದಾದಂಥ ಸಾಕ್ಷಿಯನ್ನು ಹಿಡಿದುಕೊಂಡು ಯಾರಾದರೂ ಬರಬಹುದು ಎಂದು ಕಾಯುತ್ತಿದ್ದೆ. ಆದರೆ ಅದೆಲ್ಲವೂ ವ್ಯರ್ಥವಾಯಿತು" ಎಂದು ನ್ಯಾಯಾಧೀಶರಾದ ಒಪಿ ಸೈನಿ ತಮ್ಮ 1552 ಪುಟಗಳ ತೀರ್ಪಿನಲ್ಲಿ ತಿಳಿಸಿದ್ದಾರೆ.
2ಜಿ ತರಂಗಗುಚ್ಛ ಹಗರಣದಿಂದಾಗಿ ಕಾಂಗ್ರೆಸ್ ನೇತೃತ್ವದ ಮನ್‌ಮೋಹನ್ ಸಿಂಗ್ ಸರಕಾರ ಅತ್ಯಧಿಕ ಭ್ರಷ್ಟಾಚಾರ ನಡೆಸಿದ ಸರಕಾರ ಎಂಬ ಕುಖ್ಯಾತಿಯನ್ನು ಎದುರಿಸಿ ಮುಜುಗರಕ್ಕೀಡಾಗಿತ್ತು. ಅಂದಿನ ದೂರಸಂಪರ್ಕ ಸಚಿವರಾದ ಎ ರಾಜಾ ಎರಡನೇ ತಲೆಮಾರಿನ ಅಥವಾ 2ಜಿ ತರಂಗಗುಚ್ಛ ಹಂಚಿಕೆಯಲ್ಲಿ ವ್ಯಾಪಕ ಅವ್ಯವಹಾರ ನಡೆಸಿದ್ದಾರೆ ಎಂದು 2011ರಲ್ಲಿ ಮಹಾಲೇಖಪಾಲರು ಆರೋಪಿಸಿದ್ದರು. 2ಜಿ ತನಿಖೆಯ ಎಲ್ಲಾ ಪ್ರಕರಣವನ್ನು ಪ್ರತ್ಯೇಕವಾಗಿ ಆಲಿಸಬೇಕು ಎಂಬ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ 2011ರ ಮಾರ್ಚ್‌ನಲ್ಲಿ ವಿಶೇಷ ನ್ಯಾಯಾಲಯವನ್ನು ರಚಿಸಲಾಗಿತ್ತು.
ವದಂತಿಗಳು, ಊಹೆಗಳು ಮತ್ತು ಗಾಸಿಪ್‌ಗಳನ್ನು ಆಧರಿಸಿ ಈ ಪ್ರಕರಣದಲ್ಲಿ ಸಾರ್ವಜನಿಕ ದೃಷ್ಟಿಕೋನ ಸೃಷ್ಟಿಯಾಗಿತ್ತು ಮತ್ತು ಸಾರ್ವಜನಿಕ ಊಹೆಗಳಿಗೆ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಯಾವುದೇ ಜಾಗವಿಲ್ಲ ಎಂದು ನ್ಯಾಯಾಧೀಶರಾದ ಸೈನಿ ತಿಳಿಸಿದ್ದಾರೆ.
ವಿಷಯವನ್ನು ಅರ್ಥಮಾಡಿಕೊಳ್ಳದಿರುವುದೇ 2ಜಿ ತರಂಗಗುಚ್ಛ ಹಂಚಿಕೆಯಲ್ಲಿ ಗಂಭೀರ ಅವ್ಯವಹಾರಗಳು ನಡೆದಿವೆ ಎಂದು ತಿಳಿಯಲು ಕಾರಣ ಆದರೆ ಅಂಥ ಯಾವುದೇ ತಪ್ಪುಗಳು ನಡೆದಿರಲಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಮೊದಲಿಗೆ ಸರಕಾರ ಪರ ವಕೀಲರು ಕುತೂಹಲ ಮತ್ತು ಭರವಸೆಯಿಂದಲೇ ಪ್ರಕರಣವನ್ನು ಆರಂಭಿಸಿದ್ದರು. ಆದರೆ ಪ್ರಕರಣ ಮುಂದೆ ಹೋದಂತೆಲ್ಲಾ ತಮ್ಮ ನಿಲುವಿನಲ್ಲಿ ರಹಸ್ಯವನ್ನು ಕಾಪಾಡಲು ಆರಂಭಿಸಿದ ಕಾರಣ ಅವರು ಏನು ಸಾಬೀತುಪಡಿಸಲು ಯತ್ನಿಸುತ್ತಿದ್ದಾರೆ ಎಂಬುದನ್ನು ತಿಳಿಯುವುದೇ ಕಷ್ಟವಾಯಿತು. ಅಂತಿಮವಾಗಿ ಸರಕಾರಿ ವಕೀಲರ ವಾದದ ಗುಣಮಟ್ಟ ಸಂಪೂರ್ಣವಾಗಿ ಕಳಪೆಯಾಗುತ್ತಾ ಸಾಗಿ ದಿಕ್ಕುದೆಸೆಯಿಲ್ಲದಂತಾಯಿತು ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.







