ಪರಿಸರ, ಶಿಕ್ಷಣ ಕ್ಷೇತ್ರಕ್ಕೆ ಸೈಯದ್ ಬ್ಯಾರಿಯವರ ಕೊಡುಗೆ ಅಪಾರ: ಐವನ್ ಡಿಸೋಜ
ಬ್ಯಾರೀಸ್ ಪಬ್ಲಿಕ್ ಸ್ಕೂಲ್, ಹಿಸ್ ಗ್ರೇಸ್ ಮಾಂಟೆಸರಿ ಶಾಲಾ ವಾರ್ಷಿಕೋತ್ಸವ

ಮಂಗಳೂರು, ಡಿ. 21: ಪರಿಸರ ಸಂರಕ್ಷಣೆ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಸೈಯದ್ ಮುಹಮ್ಮದ್ ಬ್ಯಾರಿ ಅವರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ಸರಕಾರ ವಿಧಾನಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.
ಅವರು ನಗರದ ಪುರಭವನದಲ್ಲಿ ಗುರುವಾರ ನಡೆದ ನಗರದ ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಮತ್ತು ಹಿಸ್ ಗ್ರೇಸ್ ಮಾಂಟೆಸರಿ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಮಾತನಾಡಿದರು.
ಸೈಯದ್ ಮುಹಮ್ಮದ್ ಬ್ಯಾರಿ ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಜನೆಗೆ ಮಹತ್ವ ನೀಡಿದ್ದಾರೆ. ಲಾಭ ಗಳಿಸುವ ಉದ್ದೇಶವನ್ನಿಟ್ಟುಕೊಳ್ಳದೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದುದ್ದೇಶದೊಂದಿಗೆ ಅವರು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದು, ಅವರ ಧ್ಯೇಯೋದ್ದೇಶಗಳು ಈಡೇರಲಿ ಎಂದು ಹಾರೈಸಿದರು.
ಶೈಕ್ಷಣಿಕ ಅಧ್ಯಯನ ಜೊತೆಗೆ ಪರಿಸರದ ಬಗ್ಗೆಯೂ ಅವರು ಕಾಳಜಿಯನ್ನು ಹೊಂದಿದ್ದಾರೆ. ಪರಿಸರ ಸಂರಕ್ಷಣೆ ಹಾಗೂ ಪರಿಸರಕ್ಕೆ ಪೂರಕವಾಗಿ ಹಲವು ಕಾರ್ಯಕ್ರಮಗಳನ್ನು ಸೈಯದ್ ಬ್ಯಾರಿ ಅವರು ಹಮ್ಮಿಕೊಂಡಿದ್ದು, ಇದರಿಂದ ಅವರ ಪರಿಸರ ಪ್ರೇಮವನ್ನು ಗುರುತಿಸಬಹುದು ಎಂದು ಐವನ್ ಅವರು ಮುಹಮ್ಮದ್ ಬ್ಯಾರಿ ಅವರ ಸೇವೆಯನ್ನು ಶ್ಲಾಘಿಸಿದರು.
ಮೇಯರ್ ಕವಿತಾ ಸನಿಲ್ ಮಾತನಾಡಿ, ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗಾಗಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವುದರಿಂದ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಒದಗಿದ ಸುವರ್ಣಾವಕಾಶ ಎಂದು ವಿದ್ಯಾರ್ಥಿಗಳು ಭಾವಿಸಬೇಕು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳು ಹೊರ ಹೊಮ್ಮಬೇಕು. ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಶಿಕ್ಷಕರು ಮತ್ತು ಹೆತ್ತವರು ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್‌ನ ಮ್ಯಾನೇಜಿಂಗ್ ಟ್ರಸ್ಟಿ ಸೈಯದ್ ಮುಹಮ್ಮದ್ ಬ್ಯಾರಿ ಅವರು, ವಿದ್ಯಾರ್ಥಿಗಳ ಹೆತ್ತವರು ತನ್ನ ಮಗುವೇ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆಯಬೇಕೆಂಬ ನಿರೀಕ್ಷೆಯನ್ನಿಟ್ಟುಕೊಳ್ಳುತ್ತಾರೆ. ಆದರೆ, ಶಿಕ್ಷಕ ವರ್ಗ ಶಾಲೆಯು ಶೇ. 100 ಫಲಿತಾಂಶ ದಾಖಲಿಸಬೇಕೆಂದು ಹಂಬಲಿಸುತ್ತದೆ. ತೀವ್ರ ಪೈಪೋಟಿ ಎದುರಿಸುತ್ತಿರುವ ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಕಲಿಯಲು ಪೂರಕ ವಾತಾವರಣದೊಂದಿಗೆ ಒತ್ತಡ ರಹಿತದ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಯಾರೀಸ್ ಗ್ರೂಪ್ ನ ನಿರ್ದೇಶಕ ಮಝರ್ ಬ್ಯಾರಿ, ಪ್ರಾಂಶುಪಾಲೆ ಗೀತಾ ರೇಗೋ, ಮಾಂಟೆಸರಿ ಶಿಕ್ಷಕಿ ಪೂರ್ಣಿಮಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಪುರಸ್ಕರಿಸಲಾಯಿತು.
ವಿದ್ಯಾರ್ಥಿಗಳಾದ ನೈಲಾ ಸ್ವಾಗತಿಸಿದರು. ಹಮ್ದಾನ್ ರಫೀಕ್ ಹಸನ್ ಮತ್ತು ಹಲೀಮಾ ಹಾಶ್ಮಿ ಕಾರ್ಯಕ್ರಮ ನಿರೂಪಿಸಿದರು. ಖದೀಜಾ ನುಫ್ರಾ ಸ್ಪರ್ಧಾ ವಿಜೇತರ ಹೆಸರು ವಾಚಿಸಿದರು.
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.







