ರೈತರಿಂದ ರಾಗಿ ಖರೀದಿಸಿ ಪಡಿತರ ಮೂಲಕ ಉಚಿತ ವಿತರಣೆಗೆ ಕ್ರಮ: ಸಚಿವ ಕೃಷ್ಣಭೈರೇಗೌಡ

ಶಿವಮೊಗ್ಗ, ಡಿ. 21 : ರೈತರಿಂದ ನೇರವಾಗಿ ಬೆಂಬಲ ಬೆಲೆ ನೀಡಿ ರಾಗಿ ಖರೀದಿಸಿ ಪಡಿತರ ವ್ಯವಸ್ಥೆ ಮೂಲಕ ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದರು. ಅವರು ಗುರುವಾರ ಶಿವಮೊಗ್ಗ ರಂಗಮಂದಿರದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಸಾವಯವ ಹಾಗೂ ಸಿರಿಧಾನ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಕ್ವಿಂಟಾಲ್‍ಗೆ 2300 ರೂ. ಬೆಂಬಲ ಬೆಲೆ ನೀಡಿ ರೈತರು ಮಾರುವ ಎಲ್ಲಾ ರಾಗಿಯನ್ನು ಖರೀದಿಸಲಾಗುವುದು. ಇದನ್ನು ಸಾರ್ವಜನಿಕ ಪಡಿತರ ವ್ಯವಸ್ಥೆ ಉಚಿತವಾಗಿ ವಿತರಿಸಲಾಗುವುದು. ಇದೇ ರೀತಿ ಬಿಳಿ ಜೋಳಕ್ಕೆ ಮಾರುಕಟ್ಟೆಯಲ್ಲಿ ದರ ಕಡಿಮೆಯಾದರೆ ಅದನ್ನು ಸಹ ರೈತರಿಂದ ಖರೀದಿಸಿ ಪಡಿತರ ಮೂಲಕ ವಿತರಿಸಲು ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಾವಯವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸಲು ಸಾವಯವ ರೈತರ ಒಕ್ಕೂಟಗಳನ್ನು ರಚಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಪ್ಯಾಕಿಂಗ್, ಲೇಬಲಿಂಗ್ ಮಾಡಿ ಯಶಸ್ವಿಯಾಗಿ ಮಾರುಕಟ್ಟೆಯಲ್ಲಿ ಮಾರಾಟ ನಡೆಸುತ್ತಿದ್ದಾರೆ. ಒಕ್ಕೂಟಗಳ ರಚನೆಯಿಂದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಸಾಧ್ಯವಾಗಿದೆ. ಹಲವು ಕಂಪೆನಿಗಳು ಸಹ ನೇರವಾಗಿ ರೈತ ಒಕ್ಕೂಟದಿಂದ ಉತ್ಪನ್ನಗಳನ್ನು ಖರೀದಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಸಿರಿಧಾನ್ಯ ಹಾಗೂ ಸಾವಯವ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲು ಶಿವಮೊಗ್ಗದಲ್ಲಿ ಉತ್ಪನ್ನ ಮಳಿಗೆ ಆರಂಭಿಸಲು ಒಕ್ಕೂಟ ಮುಂದೆ ಬಂದರೆ ಸರ್ಕಾರ ಎಲ್ಲಾ ನೆರವು ಒದಗಿಸಲಿದೆ. ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬಂದರೆ ಮಾತ್ರ ರೈತರು ಲಾಭದಾಯಕವಾಗಿ ಕೃಷಿ ಮಾಡಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.
ಆಹಾರದಲ್ಲಿ ಸಮತೋಲನ ಅಗತ್ಯ: ಇಂದು ಬಹುತೇಕ ಮಂದಿ ಬಿಳಿ ಅಕ್ಕಿ, ಮೈದಾ ಮತ್ತು ಸಕ್ಕರೆಯ ದಾಸರಾಗಿ ಮಾರ್ಪಟ್ಟಿದ್ದು, ಇದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮುಂತಾದ ಕಾಯಿಲೆಗಳು ಸಾಮಾನ್ಯವಾಗಿವೆ. ಕೃಷಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕಗಳ ಬಳಕೆಯಿಂದ ಪರಿಸರ ಸಮತೋಲನ ತಪ್ಪಿ ಹೋಗಿದ್ದು, ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆಹಾರದಲ್ಲಿ ರಾಗಿಯಂತಹ ಸಿರಿಧಾನ್ಯಗಳನ್ನು ಸಹ ಬಳಸಿಕೊಂಡು ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ಸಾವಯವ ಹಾಗೂ ಸಿರಿಧಾನ್ಯಗಳಿಗೆ ಉತ್ತೇಜನ ನೀಡಲು ಪ್ರತಿ ತಾಲೂಕಿನಲ್ಲಿ ಮಳಿಗೆಗಳನ್ನು ಆರಂಭಿಸುವ ಅಗತ್ಯವಿದೆ. ಸಾವಯವ ಉತ್ಪನ್ನಗಳಿಗೆ ಸಮರ್ಪಕ ಬೆಲೆ ದೊರೆಯುವಂತಾಗಲು ಎಲ್ಲಾ ನೆರವು ಒದಗಿಸಲಾಗುವುದು. ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಜೀವನ ಪದ್ಧತಿ ಬದಲಾವಣೆ ಅನಿವಾರ್ಯ ಎಂದು ತಿಳಿಸಿದರು.
ಮಾರಾಟ ಮಳಿಗೆ: ಮೇಳದ ಅಂಗವಾಗಿ ಸಜ್ಜುಗೊಳಿಸಲಾಗಿರುವ ಸಾವಯವ ಹಾಗೂ ಸಿರಿಧಾನ್ಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಉದ್ಘಾಟಿಸಿದರು. ಒಟ್ಟು 60 ಮಳಿಗೆಗಳಿದ್ದು, ಇಲ್ಲಿ ಸಾವಯವ ಹಾಗೂ ಸಿರಿಧಾನ್ಯ ಉತ್ಪನ್ನಗಳ ಮಾರಾಟ ಮಾತ್ರವಲ್ಲದೆ ಅವುಗಳನ್ನು ಬಳಸಿಕೊಂಡು ಸಿದ್ಧಪಡಿಸಿರುವ ಆಹಾರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಶಾಸಕಿ ಶಾರದಾ ಪೂರ್ಯ ನಾಯಕ್, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಕಾಡಾ ಅಧ್ಯಕ್ಷ ಸುಂದರೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್ ಅವರು ಸ್ವಾಗತಿಸಿದರು.







