ಹಿರಿಯ ಪತ್ರಕರ್ತ ಡಿ.ಮಹಾದೇವಪ್ಪ ಅವರಿಗೆ ಜೆಎಸ್‍ಎಸ್ ಪ್ರಶಸ್ತಿ ಪ್ರಧಾನ
ಮೈಸೂರು,ಡಿ.21: ಸುತ್ತೂರು ಮಠದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಯನ್ನು ಹಿರಿಯ ಪರ್ತಕರ್ತ ಡಿ.ಮಹಾದೇವಪ್ಪ ಅವರಿಗೆ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಈಶ್ವರ ದೈತೋಟ ಅವರು ಮಹಾದೇವಪ್ಪ ಅವರನ್ನು ಮಠದಿಂದ ಕೊಡುವ ಪ್ರಶಸ್ತಿ ಫಲಕ, ಮೈಸೂರು ಪೇಟ, ಶಾಲು ಹೊದಿಸಿ ಸನ್ಮಾನಿಸಿದರು.
ನಂತರ ಮಾತನಾಡಿದ ಈಶ್ವರ್ ದೈತೋಟ ಅವರು, ಪತ್ರಕರ್ತರಿಗೆ ಬದ್ಧತೆ, ಸಮಾಜಿಕ ಜವಾಬ್ದಾರಿ ಮತ್ತು ಸಾಮಾಜಿಕ ಕಾಳಜಿಯ ಕಳಕಳಿ ಅವಶ್ಯವೆಂದು ಅಭಿಪ್ರಾಯಪಟ್ಟರು. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಶೇಕಡ 35 ರಷ್ಟು ಸುಳ್ಳು ಸುದ್ದಿಗಳು ಬಿತ್ತರವಾಗುತ್ತಿರುವುದು ಆತಂಕಕಾರಿ. ಪತ್ರಕರ್ತರು ಸ್ವಸ್ಥ ಸಮಾಜ ನಿರ್ಮಾಣದ ಗುರುತರ ಜವಾಬ್ದಾರಿ ಹೊಣೆಗಾರಿಕೆಯ ಕಳಕಳಿಯಿದ್ದು, ಪ್ರತಿಯೊಬ್ಬ ಪತ್ರಕರ್ತರು ಸಾಮಾಜಿಕ ಜವಾಬ್ದಾರಿ ಮೆರೆಯಬೇಕು ಎಂದು ಸಲಹೆ ನೀಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಡಿ.ಮಹಾದೇವಪ್ಪ, ಜೆಎಸ್‍ಎಸ್ ಮಠ ಜಾತ್ಯಾತೀತ, ಧರ್ಮಾತೀತವಾಗಿದ್ದು, ಜಾತಿ ಮತದ ಸೋಂಕಿಲ್ಲದೆ ಮಠದಲ್ಲಿ ಕಲಿತ ಪಾಠ ನನ್ನ ವ್ಯಕ್ತಿತ್ವ ರೂಪಿಸಿತು ಎಂದು ತಮ್ಮ ವಿದ್ಯಾರ್ಥಿ ದಿನಗಳನ್ನು ಮೆಲುಕು ಹಾಕಿ ಅಂತಹ ಸಂಸ್ಥೆಯಿಂದ ನೀಡಲ್ಪಟ್ಟ ಪ್ರಶಸ್ತಿಯನ್ನು ತುಂಬು ಹೃದಯದಿಂದ ಸ್ವೀಕರಿಸುತ್ತಿರುವುದಾಗಿ ಹೇಳಿದರು.
ಪತ್ರಕರ್ತ ಸುದ್ದಿ ತಿರುಕನ ರೀತಿ ಕೆಲಸ ಮಾಡುತ್ತಿದ್ದರೂ ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಜೊತೆಗೆ ಪತ್ರಿಕೋಧ್ಯಮದಲ್ಲಿ ವರದಿಗಾರಿಕೆಯು ಬಹಳಷ್ಟು ಅನುಭವ ನೀಡುವುದಲ್ಲದೇ ಹೊಸತನ ಮತ್ತು ಸವಾಲನ್ನು ಎದುರಿಸುವ ಅವಕಾಶ ನೀಡುವುದರಿಂದ ವರದಿಗಾರಿಕೆ ತಮಗೆ ತೃಪ್ತಿ ನೀಡಿದ್ದು, ರಾಜ್ಯಾದ್ಯಂತ ಸಂಚರಿಸಿ ವಿನೂತನ ಅನುಭವ ಪಡೆದೆ ಎಂದ ಅವರು, ಮುಂದಿನ ಜನ್ಮವಿದ್ದರೆ ವರದಿಗಾರನಾಗಿಯೇ ಹುಟ್ಟುವ ಆಸೆಯಿದೆ ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಹಿರಿಯ ಪತ್ರಕರ್ತ ಶಿವಾನಂದ ತಗಡೂರು, ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಕೆ.ದೀಪಕ್, ಎಸ್.ಟಿ.ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







