ನ್ಯಾಯಾಧೀಶರ ವೇತನ ಏರಿಕೆಗೆ ಮಸೂದೆ ಮಂಡನೆ
.jpg)
ಹೊಸದಿಲ್ಲಿ, ಡಿ.21: ಸುಪ್ರೀಂಕೋರ್ಟ್ ಹಾಗೂ 24 ಹೈಕೋರ್ಟ್‌ಗಳ ನ್ಯಾಯಾಧೀಶರ ವೇತನ ಏರಿಸುವ ಕುರಿತ ಮಸೂದೆಯನ್ನು ಲೋಕಸಭೆಯಲ್ಲಿಂದು ಮಂಡಿಸಲಾಗಿದೆ.
ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರ(ವೇತನ ಮತ್ತು ಸೇವಾ ನಿಯಮಗಳು) ತಿದ್ದುಪಡಿ ಮಸೂದೆ 2017ರಲ್ಲಿ ಹಾಲಿ ನ್ಯಾಯಾಧೀಶರ ವೇತನವನ್ನು ಎರಡುಪಟ್ಟು ಹೆಚ್ಚಿಸುವ ಪ್ರಸ್ತಾವವಿದ್ದು , ಇದಕ್ಕೆ ಸಂಸತ್ತಿನ ಅಂಗೀಕಾರ ದೊರಕಿದರೆ ಮುಖ್ಯ ನ್ಯಾಯಮೂರ್ತಿ ಈಗಿರುವ ವೇತನ 1 ಲಕ್ಷ ರೂ. ಬದಲು 2.80 ಲಕ್ಷ ರೂ. ತಿಂಗಳ ವೇತನ ಪಡೆಯಲಿದ್ದಾರೆ. ಇದೇ ರೀತಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ಹಾಗೂ ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರ ತಿಂಗಳ ವೇತನ ಈಗ ಇರುವ 90,000 ರೂ. ಬದಲಿಗೆ 2.50 ಲಕ್ಷ ರೂ. ಆಗಲಿದೆ. ಈಗ ತಿಂಗಳಿಗೆ 80,000 ರೂ. ವೇತನ ಪಡೆಯುತ್ತಿರುವ ಹೈಕೋರ್ಟ್‌ನ ನ್ಯಾಯಾಧೀಶರು 2.25 ಲಕ್ಷ ರೂ. ವೇತನ ಪಡೆಯಲಿದ್ದಾರೆ. ಲೋಕಸಭೆಯಲ್ಲಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಈ ಮಸೂದೆಯನ್ನು ಮಂಡಿಸಿದರು.
ಇದೇ ರೀತಿ ನ್ಯಾಯಾಧೀಶರಿಗೆ ನೀಡಲಾಗುತ್ತಿರುವ ಮನೆ ಬಾಡಿಗೆ ಭತ್ತೆ ಕೂಡ ಸುಮಾರು ಎರಡೂವರೆ ಪಟ್ಟು ಹೆಚ್ಚಲಿದ್ದು ಇದು 2017ರ ಜುಲೈ 1ರಿಂದ ಅನ್ವಯವಾಗಲಿದೆ. ಅಲ್ಲದೆ 2016ರಿಂದ ಪರಿಷ್ಕೃತ ಪಿಂಚಣಿಯನ್ನೂ ನೀಡಲಾಗುತ್ತಿದ್ದು ಇದರಿಂದ ಸುಮಾರು 2,500 ನಿವೃತ್ತ ನ್ಯಾಯಾಧೀಶರಿಗೆ ಅನುಕೂಲವಾಗಲಿದೆ. 6ನೇ ವೇತನ ಆಯೋಗದ ವರದಿ ಪ್ರಕಾರ ನ್ಯಾಯಾಧೀಶರಿಗೆ ವೇತನ ನೀಡಲಾಗುವುದು. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ 1,100ಕ್ಕೂ ಹೆಚ್ಚು ನ್ಯಾಯಾಧೀಶರ ಸ್ಥಾನವಿದ್ದು, ಈಗ 700ಕ್ಕೂ ಹೆಚ್ಚು ನ್ಯಾಯಾಧೀಶರು ಕರ್ತವ್ಯದಲ್ಲಿದ್ದು, ಉಳಿದ ಹುದ್ದೆಗಳು ಖಾಲಿಯಿವೆ. ನ್ಯಾಯಾಧೀಶರ ವೇತನದಲ್ಲಿ ಶೇ.300ರಷ್ಟು ಹೆಚ್ಚಳ ಕೋರಿ 2016ರಲ್ಲಿ ಅಂದಿನ ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಸರಕಾರಕ್ಕೆ ಪತ್ರ ಬರೆದಿದ್ದರು.







