ಮಡಿಕೇರಿ : ಯುವ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಎಂ.ಬಿ.ಜೋಯಪ್ಪ ರಾಜಿನಾಮೆ

ಮಡಿಕೇರಿ,ಡಿ. 21 : ಹಲವು ಹೋರಾಟಗಳ ನಂತರವೂ ನಗರದಲ್ಲಿರುವ ಯುವ ಭವನವನ್ನು ಜಿಲ್ಲಾಡಳಿತ ಜಿಲ್ಲಾ ಯುವ ಒಕ್ಕೂಟದ ಸುಪರ್ದಿಗೆ ವಹಿಸದ ಕಾರಣ ಬೇಸರಗೊಂಡು ಒಕ್ಕೂಟದ ಜಿಲ್ಲಾಧ್ಯಕ್ಷ ಸ್ಥಾನವನ್ನು ತ್ಯಜಿಸುತ್ತಿರುವುದಾಗಿ ಅಧ್ಯಕ್ಷ ಮಂಡುವಂಡ ಬಿ. ಜೋಯಪ್ಪ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಯುವ ಭವನವನ್ನು ಯುವ ಚಟುವಟಿಕೆಗಳಿಗಾಗಿ ಯುವ ಒಕ್ಕೂಟದ ಸುಪರ್ದಿಗೆ ಬಿಟ್ಟು ಕೊಡಬೇಕೆಂದು, ಜಿಲ್ಲಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ 2013 ರಿಂದ ಇಲ್ಲಿಯವರೆಗೆ ಅನೇಕ ಮನವಿ ಪತ್ರಗಳನ್ನು ಸಲ್ಲಿಸುತ್ತಲೇ ಬರಲಾಗಿದೆ. ಅಲ್ಲದೆ ಪ್ರತಿಭಟನೆಯನ್ನು ಕೂಡ ನಡೆಸಲಾಗಿದೆ. ಆರು ತಿಂಗಳ ಹಿಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದಾಗ ಜಿಲ್ಲಾಧಿಕಾರಿಗಳು ಮುಂದಿನ ಆರು ತಿಂಗಳೊಳಗೆ ಯುವ ಭವನವನ್ನು ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದರು.
ಯುವ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಕಾಲೇಜಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಹೇಳಲಾಗಿತ್ತಾದರೂ ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಿಳಾ ಕಾಲೇಜ್ ಕಟ್ಟಡ ನಿರ್ಮಾಣಕ್ಕಾಗಿ ರೂ. 2 ಕೋಟಿ ಅನುದಾನ ಮುಂಜೂರಾಗಿ ವರ್ಷ ಕಳೆದಿದ್ದರೂ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಜಿಲ್ಲಾಡಳಿತವಾಗಲಿ ಕಾಳಜಿ ತೋರಿಲ್ಲ. ಇದರಿಂದ ಯುವ ಜನಾಂಗಕ್ಕೆ, ಕೊಡಗಿನ ಯುವಕ, ಯುವತಿ ಮಂಡಳಿಗಳ ಸದಸ್ಯರಿಗೆ, ಯುವ ಕಾರ್ಯ ಚಟುವಟಿಕೆಗಳಿಗೆ ಮಾಡಿದ ದ್ರೋಹವಾಗಿದೆ ಎಂದು ಜೋಯಪ್ಪ ಆರೋಪಿಸಿದ್ದಾರೆ.
ಯುವ ಒಕ್ಕೂಟ ಯುವಕ, ಯುವತಿ ಮಂಡಳಿಗಳನ್ನು ನೋಂದಾಯಿಸಿಕೊಂಡು ಕೊಡಗಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿರುವುದಲ್ಲದೆ ವಿವಿಧ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಮಾದರಿಯಾಗಿ ಬೆಳೆದು ನಿಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲಾಖೆಗಳ ನೀತಿ, ನಿಯಮ ಮತ್ತು ಸುತ್ತೋಲೆಗಳಿಂದ ಕಾರ್ಯಕ್ರಮಗಳನ್ನು ನಡೆಸಲೂ ಕಷ್ಟವಾಗುತ್ತಿದೆ. ಆದರೂ ಯುವಕ, ಯುವತಿ ಮಂಡಳಿಗಳನ್ನು ಸದೃಢಗೊಳಿಸಿ ಯುವ ಚಟುವಟಿಕೆಗಳನ್ನು ಯಶಸ್ವಿಗೊಳಿಸಲಾಗಿದೆ.
ಯುವ ಸಮೂಹದ ಉತ್ಸಾಹಕ್ಕೆ ಪೂರಕ ವಾತಾವರಣವನ್ನು ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಸೃಷ್ಟಿಸದೆ ಇರುವುದರಿಂದ ಬೇಸರಗೊಂಡು ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ತ್ಯಜಿಸುತ್ತಿರುವುದಾಗಿ ಎಂ.ಬಿ.ಜೋಯಪ್ಪ ಸ್ಪಷ್ಟಪಡಿಸಿದ್ದಾರೆ.







