ರಾಜ್ಯದಲ್ಲಿ ಕೋಮು ಸೌಹಾರ್ದತೆ ಹಾಳು ಮಾಡಲು ಬಿಜೆಪಿ ಪಿತೂರಿ: ಪಂಕಜ್ ಗುಪ್ತ
ವಿಧಾನಸಭಾ ಚುನಾವಣೆ ಸ್ಪರ್ಧೆಗೆ ಆಮ್ ಆದ್ಮಿ ತಯಾರಿ
ಬೆಂಗಳೂರು, ಡಿ.21: ಮುಂದಿನ ವರ್ಷದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯಾದ್ಯಂತ ಸ್ಪರ್ಧೆ ಮಾಡಲು ತಯಾರಿ ನಡೆಸುತ್ತಿದೆ ಎಂದು ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಿರುದ್ಯೋಗ, ಹಸಿವು, ಬಡತನ ಸೇರಿದಂತೆ ರೈತರು, ಕೃಷಿ-ಕೂಲಿ ಕಾರ್ಮಿಕರು ನೂರಾರು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆದರೆ, ಜನಸಾಮಾನ್ಯರ ಪರವಾಗಿ ನಿಲ್ಲಬೇಕಾದ ಸರಕಾರಗಳು ಜನವಿರೋಧಿಯಾಗಿ ನಡೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಆಮ್‌ಆದ್ಮಿ ಪಕ್ಷ ಭ್ರಷ್ಟಾಚಾರ, ಅಪರಾಧಿ, ಸಮಾಜ ವಿರೋಧಿ ಮತ್ತು ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ವಿರುದ್ಧ ಹೋರಾಟಕ್ಕೆ ಕರೆ ನೀಡಲಿದೆ. ರಾಜ್ಯದ ಉಳಿವು, ಬೆಳವಣಿಗೆ ಹಾಗೂ ಅಭಿವೃದ್ಧಿ ವಿಚಾರವನ್ನಿಟ್ಟುಕೊಂಡು ಮುಂದಿಟ್ಟುಕೊಂಡು ಚುನಾಣೆ ಎದುರಿಸಲಿದೆ ಎಂದು ಹೇಳಿದರು.
ಬಿಜೆಪಿಯು ಗುಜರಾತ್ ಮಾದರಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಪ್ರಯತ್ನ ನಡೆಸುತ್ತಿದೆ. ಆದರೆ, ಅದು ಸಾಧ್ಯವಾಗುವುದಿಲ್ಲ ಎಂದು ಅರ್ಥವಾದ ನಂತರ, ಮಸೀದಿ-ಮಂದಿರ, ಜಾತಿ-ಧರ್ಮಗಳ ಮೇಲೆ ರಾಜಕೀಯ ನಡೆಸಲು ಮುಂದಾಗಿದೆ. ರಾಜ್ಯ ಸರಕಾರ ಜನಪರ ಯೋಜನೆಗಳು ಜಾರಿ ಮಾಡುವ ಬದಲಿಗೆ ಲೂಟಿಕೋರರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ಸೇರಿಕೊಂಡು ಭ್ರಷ್ಟಾಚಾರ ನಡೆಸಲು ಪೈಪೋಟಿ ನಡೆಸುತ್ತಿವೆ. ಹಾಗೂ ಸಾಮೂಹಿಕ ಭ್ರಷ್ಟಾಚಾರಕ್ಕಿಳಿದಿದ್ದಾರೆ ಎಂದು ಟೀಕಿಸಿದರು.
ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಕರ್ನಾಟಕದಲ್ಲಿ ಗುಜರಾತ್ ಮಾದರಿಯ ಪ್ರಚಾರ ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋಮು ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಹಾಳು ಮಾಡಲು ಪಿತೂರಿ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಭ್ರಷ್ಟಾಚಾರದಲ್ಲಿ ಮುಳುಗಿ ಎದ್ದಿರುವ ಯಡಿಯೂರಪ್ಪರನ್ನು ಸಿಎಂ ಎಂದು ಬಿಂಬಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿಯೂ ವ್ಯಾಪಕವಾದ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ಮುಚ್ಚಿಕೊಳ್ಳಲು ಲೋಕಾಯುಕ್ತ ಮುಚ್ಚಿ ಎಸಿಬಿ ಮಾಡಿದರು ಎಂದು ದೂರಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದಿಲ್ಲಿಯಲ್ಲಿ ನಡೆದಿರುವ ಶಿಕ್ಷಣ, ಆರೋಗ್ಯ, ಕ್ರೀಡೆ, ವಿಶ್ವವಿದ್ಯಾಲಯಗಳ ಅಭಿವೃದ್ಧಿ, ಗುಣಮಟ್ಟದ ಮೂಲಭೂತ ಸೌಲಭ್ಯಗಳು ಸೇರಿದಂತೆ ಅಲ್ಲಿನ ಸರಳ ಜೀವನ ಹಾಗೂ ಸರಳ ಅಧಿಕಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಆಮ್ ಆದ್ಮಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಸಂಜಯ್ ಸಿಂಗ್, ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಸಹ ಸಂಚಾಲಕ ಶಿವಕುಮಾರ್, ರೇಣುಕಾ ವಿಶ್ವನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







