ವಿಜ್ಞಾನ ಪರಿಷತ್ತು ಪದಾಧಿಕಾರಿಗಳು ಅವ್ಯವಹಾರದಲ್ಲಿ ಭಾಗಿ : ಆರೋಪ
ಬೆಂಗಳೂರು, ಡಿ.21: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪದಾಧಿಕಾರಿಗಳು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಈ ಸಮಿತಿಯನ್ನು ನಿಷ್ಕೃಿಯಗೊಳಿ ಸಬೇಕು ಎಂದು ಕರಾವಿಪ ಬೆಂಗಳೂರು ನಗರ ದಕ್ಷಿಣ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಸುಬ್ಬಾರಾವ್, ಶಾಲಾ-ಕಾಲೇಜು ಮೂಲಕ ಮನೆ ಮನೆಗೆ ವಿಜ್ಞಾನ ವಿಷಯಗಳನ್ನು ಪ್ರಚಾರ ಮಾಡುವುದು, ಸಾರ್ವಜನಿಕ ಚರ್ಚೆ, ಶೈಕ್ಷಣಿಕ ಪ್ರವಾಸ, ವಿಜ್ಞಾನ ವಸ್ತು ಪ್ರದರ್ಶನ ಸೇರಿದಂತೆ ಹಲವು ಸಾಮಾಜಿಕ ಚಟುವಟಿಕೆಗಳಿಗೆ ಬಳಕೆಯಾಗಬೇಕಿದ್ದ ಅನುದಾನವನ್ನು ಸಮಿತಿ ಪದಾಧಿಕಾರಿಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಆಡಳಿತಾತ್ಮಕ ಕುರಿತು ಅರಿವಿಲ್ಲದೆ ವಾಮ ಮಾರ್ಗದಿಂದ ಒಳಬಂದಿರುವ ಪರಿಷತ್ತಿನ ಹಲವು ಪದಾಧಿಕಾರಿಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದರ ಬದಲಿಗೆ, ಅವೈಜ್ಞಾನಿಕವಾದ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ. ಅಲ್ಲದೆ, ಪರಿಷತ್ತಿನ ಬೈಲಾವನ್ನು ಅವರ ಅನುಕೂಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಿಕೊಂಡಿದ್ದಾರೆ ಹಾಗೂ ಪರಿಷತ್ತಿನ ಸದಸ್ಯತ್ವವನ್ನು ತಮ್ಮ ಸಂಬಂಧಿಕರಿಗೆ ನೀಡಿದ್ದಾರೆ. ಮತಪತ್ರವನ್ನು ಅಂಚೆ ಮೂಲಕ ಮನೆಗೆ ಕಳುಹಿಸಿ, ಅದನ್ನು ಮನೆ ಮನೆಗೆ ಭೇಟಿ ನೀಟಿ ಸಂಗ್ರಹಿ ಸಿದ್ದಾರೆ ಎಂದು ಹೇಳಿದರು.
ಪರಿಷತ್ತಿನ ಹಗರಣದ ಬಗ್ಗೆ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಲೆಕ್ಕಪತ್ರ ಹಾಗೂ ಚಟುವಟಿಕೆಗಳ ವರದಿಯನ್ನು ಧಾರವಾಡದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ತರಾತುರಿಯಲ್ಲಿ ಅಂಗೀಕಾರ ಪಡೆದಿದ್ದಾರೆ. ಈ ಮೂಲಕ ತಮ್ಮ ಭ್ರಷ್ಟಾಚಾರ, ಅವ್ಯವಹಾರವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದುದರಿಂದ ಕೂಡಲೇ ಈ ಸಮಿತಿಯನ್ನು ನಿಷ್ಕೃಿಯಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.







