ತಾಲೂಕು ಕಚೇರಿಗೆ ರೈತಸಂಘದ ಕಾರ್ಯಕರ್ತರ ಮುತ್ತಿಗೆ
ಪಡೆದ ಲಂಚ ವಸೂಲಿ; ಅಧಿಕಾರಿಗಳಿಗೆ ತರಾಟೆ

ಮದ್ದೂರು, ಡಿ.21: ತಾಲೂಕು ಮತ್ತಿತರೆ ಕಚೇರಿಯಲ್ಲಿನ ಭ್ರಷ್ಟಾಚಾರ ನಿಯಂತ್ರಣ ಮತ್ತು ಪಾರದರ್ಶಕ ಆಡಳಿತ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ(ಮೂಲ ಸಂಘಟನೆ)ದ ಕಾರ್ಯಕರ್ತರು ಗುರುವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.
ಸರಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಭೂ ದಾಖಲೆ ಸಂಬಂಧದ, ಜಮೀನು ಖಾತಾ, ತಿದ್ದುಪಡಿ, ಪಹಣಿ ಹದ್‍ಬಸ್ತ್ ಅಳತೆ, ತತ್ಕಾಲ್ ಪೋಡಿ, ಸಾಮಾಜಿಕ ಭದ್ರತಾ ಯೋಜನೆಗಳ, ಪಡಿತರ ಚೀಟಿ ಮುಂತಾದ ಕೆಲಸಗಳಿಗೆ ಅಲೆಯಬೇಕಾಗಿದೆ ಎಂದು ಅವರು ಕಿಡಿಕಾರಿದರು.
ಹಿಂಗಾರು ಬೆಳೆ ಬಿತ್ತಲು ಹಣಕಾಸು ನೆರವು ಸಿಗುತ್ತಿಲ್ಲ. ಹೊಸದಾಗಿ ಬೆಳೆ ಸಾಲ ನೀಡುತ್ತಿಲ್ಲ. ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲಮನ್ನಾಗೆ ಮುಂದಾಗುತ್ತಿಲ್ಲ. ಹಾಲಿನ ಬೆಲೆ ಕಡಿಮೆಯಾಗಿದೆ. ತೆಂಗಿಗೆ ಪರಿಹಾರ ಬಂದಿಲ್ಲ. ಅಡವಿಟ್ಟ ಆಭರಣಗಳ ಹರಾಜು ಹಾಕಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಾಣಿಜ್ಯ ಬ್ಯಾಂಕ್‍ನಲ್ಲಿನ ರೈತರ ಸಾಲಮನ್ನಾ ಮಾಡಬೇಕು. ಹಿಂಗಾರು ಬೆಳೆಗೆ ಹೊಸ ಸಾಲ ವಿತರಿಸಬೇಕು. ಹಾಲಿಗೆ ಕನಿಷ್ಠ 40 ರೂ. ನಿಗದಿ ಮಾಡಬೇಕು. ರೇಷ್ಮೆ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಒಣಗಿದ ತೆಂಗಿನ ಮರವೊಂದಕ್ಕೆ 10 ಸಾವಿರ ರೂ. ಪರಿಹಾರ ನೀಡಬೇಕು. ಟನ್ ಕಬ್ಬಿಗೆ 3,500 ರೂ.ನಿಗದಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ಉಪಾಧ್ಯಕ್ಷ ಎಸ್.ವಿಶ್ವನಾಥ್, ತಾಲೂಕು ಅಧ್ಯಕ್ಷ ರಮೇಶ್, ರಾಮಲಿಂಗೇಗೌಡ, ಸೋ.ಸಿ. ಪ್ರಕಾಶ್, ಕೆ.ರಾಮೇಗೌಡ, ನಿಂಗೇಗೌಡ, ಕೆ.ಜಿ.ಉಮೇಶ್, ಮಾದೇಗೌಡ, ಕೆಂಪೇಗೌಡ, ಗಣೇಶ್, ರಾಮಲಿಂಗಯ್ಯ, ಶ್ರೀಧರ್, ಪ್ರಭುಲಿಂಗ, ಕಿರಣ್ ಕುಮಾರ್, ತಮ್ಮಣ್ಣಗೌಡ, ಜೆ.ದಿನೇಶ್, ಕಾ.ಮ.ಮಹೇಶ್, ಎಳೇಗೌಡ, ಇತರ ಮುಖಂಡರು ಭಾಗವಹಿಸಿದ್ದರು.
ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡರು:
ತಮ್ಮ ಅಹವಾಲುಗಳನ್ನು ಸಾರ್ವಜನಿಕವಾಗಿ ಆಲಿಸಲು ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ರೈತರು ಪಟ್ಟುಹಿಡಿದ ಪರಿಣಾಮ ತಹಸೀಲ್ದಾರ್ ಸೇರಿದಂತೆ ತಾಲೂಕು ಕಚೇರಿ, ಕೃಷಿ, ವಿದ್ಯುತ್, ಸರ್ವೆ, ಇತರೆ ಇಲಾಖೆ ಅಧಿಕಾರಿಗಳು ಕಚೇರಿ ಬಿಟ್ಟು ಸ್ಥಳಕ್ಕಾಗಮಿಸಿದರು.
ಸಾರ್ವಜನಿಕರ ಸಮ್ಮುಖದಲ್ಲಿ ದಾಖಲೆ ಸಮೇತ ಒಂದೊಂದೇ ಅಧಿಕಾರಿಯ ಬೆವರಿಳಿಸಿದ ಚಳವಳಿಗಾರರು, ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಂಡರು. ಇನ್ನು ಮುಂದೆ ಸರಿಯಾಗಿ, ಸಮರ್ಪಕವಾಗಿ, ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಎಚ್ಚರಿಕೆ ನೀಡಿದರು.
ಪಡೆದ ಲಂಚ ವಸೂಲಿ:
ಕೃಷಿಪತ್ತಿನ ಸಹಕಾರ ಸಂಘದ ಸಾಲಕ್ಕೆ ಭೂಮಿ ರಿಜಿಸ್ಟರ್ ಮಾಡಲು ಕ್ಯಾತಘಟ್ಟದ ರೈತ ಕೆಂಪೇಗೌಡರಿಂದ ನಿಗದಿಗಿಂತ ಹೆಚ್ಚು ಪಡೆದಿದ್ದ ಹಣವನ್ನು ಸಬ್‍ರಿಜಿಸ್ಟ್ರಾರ್ ನಂಜಪ್ಪ ಪ್ರತಿಭಟನಾಕಾರರ ಸಮ್ಮುಖದಲ್ಲಿ ರೈತನಿಗೆ ಹಿಂತಿರುಗಿಸಿದರು.
ಸ್ಥಳಕ್ಕಾಗಮಿಸಿದ್ದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವಿ, ಸೆಸ್ಕ್ ಎಇಇ ಮಂಜುನಾಥ್, ತಾಲೂಕು ಕಚೇರಿ ಆಹಾರ ಶಾಖೆಯ ಮಹಾಲಕ್ಷ್ಮಿ, ಸಾಮಾಜಿಕ ಭದ್ರತಾ ಯೋಜನೆ ವಿಭಾಗದ ಗುಮಾಸ್ತೆ ಮಹದೇವಮ್ಮ ಅವರನ್ನು ರೈತರು ತರಾಟೆಗೆ ತೆಗೆದುಕೊಂಡು ಅವ್ಯವಸ್ಥೆ ಸರಿಪಡಿಸಿಕೊಳ್ಳಲು ತಾಕೀತು ಮಾಡಿದರು.
ತಾಲೂಕು ಕಚೇರಿಯಲ್ಲಿ ತೆಗೆಸಲಾಗಿರುವ ಸಿಸಿ ಕೆಮರ ಮತ್ತೆ ಅಳವಡಿಸುವುದಾಗಿ ಭರವಸೆ ನೀಡಿದ ತಹಸೀಲ್ದಾರ್ ನಾಗರಾಜು, ತಾನು ಇತ್ತೀಚೆಗೆ ಇಲ್ಲಿಗೆ ವರ್ಗವಾಗಿದ್ದು, ಸಮಸ್ಯೆಗಳ ಅರಿವಿರಲಿಲ್ಲ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದರು.
ತಾಲೂಕಿನ ಎಸ್.ಐ.ಹಾಗಲಹಳ್ಳಿ ಇನಾಂ ಗ್ರಾಮವಾಗಿದ್ದು, ಪಹಣಿ ಪಡೆಯಲು ಸಾಧ್ಯವಾಗುತ್ತಿಲ್ಲ. ಕೈಬರಹದ ಪಹಣಿಯಿಂದ ಯಾವುದೇ ಸಾಲ ಸೌಲಭ್ಯ ಸಿಗುತ್ತಿಲ್ಲ. ರೀಸರ್ವೆ ಮಾಡಿಸಿ ಪಹಣಿ ದೊರೆಯುವಂತೆ ಮಾಡಬೇಕೆಂದು ರೈತರು ಒತ್ತಾಯಿಸಿದರು. ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ನಾಗರಾಜು ಭರವಸೆ ನೀಡಿದರು.







