ಶಾಸಕ ನರೇಂದ್ರಸ್ವಾಮಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ : ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪ
ಮಂಡ್ಯ, ಡಿ.21: ಮಳವಳ್ಳಿ ತಾಲೂಕಿನಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಅವರ ಸಹೋದರರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಆರೋಪಿಸಿರುವ ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರಸ್ವಾಮಿ ಮತ್ತವರ ಸಹೋದರರು ಮೊದಲಿನಿಂದಲೂ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಸಹಕಾರ ನಿತಿದೆ ಎಂದು ದೂರಿದರು.
ಇದರ ವಿರುದ್ಧ ಹಲವು ಬಾರಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆಪಾದಿಸಿದರು.
ಕಾಂಗ್ರೆಸ್ ಸಮ್ಮೇಳನವಾಗಿದೆ: ಮಳವಳ್ಳಿಯಲ್ಲಿ ಡಿ.23, 24ರಂದು ನಡೆಯುತ್ತಿರುವ 15ನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಪೂರ್ಣವಾಗಿ ಕಾಂಗ್ರೆಸ್ ಸಮ್ಮೇಳನವಾಗಿ ಮಾರ್ಪಟ್ಟಿದೆ ಎಂದು ಅನ್ನದಾನಿ ಟೀಕಿಸಿದರು.
ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲೆಯ ಸಾಹಿತಿಗಳು, ಕಲಾವಿದರ ಹೆಸರನ್ನು ಹಾಕಿಲ್ಲ. ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಇಡೀ ಆಹ್ವಾನ ಪತ್ರಿಕೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು, ಮುಖಂಡರ ಹೆಸರನ್ನು ಹಾಕಲಾಗಿದೆ ಎಂದರು.
ನಾನೂ ಒಬ್ಬ ಕಲಾವಿದನಾಗಿದ್ದೇನೆ. ಕಲಾವಿದನಾಗಿ ಗುರುತಿಸಬೇಕಿತ್ತು. ಆದರೆ, ರಾಜಕೀಯ ಮುಖಂಡನಾಗಿ ಗುರುತಿಸುವ ಮೂಲಕ ನನ್ನನ್ನು ಕೈಬಿಡಲಾಗಿದೆ. ಇದೊಂದು ಚುನಾವಣಾ ಪ್ರಚಾರದ ಸಾಹಿತ್ಯ ಸಮ್ಮೇಳನವಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಜಾ.ದಳ ಎಸ್‍ಸಿ, ಎಸ್‍ಟಿ ವಿಭಾಗದ ರಾಜ್ಯ ಉಪಾಧ್ಯಕ್ಷ ಎಂ.ಬಿ.ಶ್ರೀನಿವಾಸ್, ಜಯರಾಂ, ಪ್ರಾಣೇಶ್, ಸಿದ್ದಪ್ಪ, ಪಂಚಲಿಂಗಯ್ಯ ಹಾಗು ಭದ್ರಚಲಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.







