ತುರ್ತು ಚಿಕಿತ್ಸೆಯ ಅಂಬ್ಯುಲೆನ್ಸ್‌ಗೆ ಪೊಲೀಸ್ ಬೆಂಗಾವಲು: ಲಿವರ್ ಸಮಸ್ಯೆಯ ಬಾಲಕಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ

ಉಡುಪಿ, ಡಿ.21: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯ ತುರ್ತು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್‌ಗೆ ಬೈಂದೂರಿನಿಂದ ಮಂಗಳೂರುವರೆಗೆ ಪೊಲೀಸ್ ಬೆಂಗಾವಲು ವ್ಯವಸ್ಥೆಯನ್ನು ಕಲ್ಪಿಸಿ ಬಜ್ಪೆ ವಿಮಾನ ನಿಲ್ದಾಣ ಮೂಲಕ ಬೆಂಗಳೂರಿಗೆ ಕಳುಹಿಸಿಕೊಟ್ಟ ಅಪರೂಪದ ವಿದ್ಯಾಮಾನವೊಂದು ಇಂದು ನಡೆದಿದೆ.
ಬೈಂದೂರು ಕಾಲ್ತೋಡು ಗ್ರಾಮದ ಮೂರುರು ಕಪ್ಪಾಡಿ ಶಾಲೆಯ ಮುಖ್ಯ ಶಿಕ್ಷಕ ಸಂಜೀವ ಗೌಡ ಎಂಬವರ ಪುತ್ರಿ ಅನುಷಾ ಕಳೆದ ಹಲವು ದಿನಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಬಾಲಕಿಯ ಸ್ಥಿತಿ ಇಂದು ಗಂಭೀರಗೊಂಡ ಹಿನ್ನೆಲೆಯಲ್ಲಿ ಅಗತ್ಯ ಚಿಕಿತ್ಸೆಗಾಗಿ ಬೆಂಗಳೂರು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಬೇಕಾಗಿತ್ತು. ಬಾಲಕಿಯ ಪೋಷಕರ ನೆರವಿಗೆ ಆಗಮಿಸಿದ ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಜಿಲ್ಲಾಡಳಿತ ವನ್ನು ಸಂಪರ್ಕಿಸಿದರು.
ಕೂಡಲೇ ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತವು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿತು. ಅದರಂತೆ ಬಾಲಕಿಯ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಅಂಬ್ಯುಲೆನ್ಸ್‌ಗೆ ಬೆಂಗಾವಲು ವ್ಯವಸ್ಥೆ ಮತ್ತು ಸಂಚಾರ ಮುಕ್ತಕ್ಕೆ ಎಸ್ಪಿಯವರು ಕ್ರಮ ತೆಗೆದುಕೊಂಡರು. ಅರೆಶಿರೂರಿನಿಂದ ಬಜ್ಪೆಯವರೆಗೆ ಆಯಾ ಠಾಣೆಯ ಪೊಲೀಸ್ ವಾಹನವು ಬೆಂಗಾವಲಿನ ವ್ಯವಸ್ಥೆ ಮಾಡಿತ್ತು. ಹೆದ್ದಾರಿ ಗಸ್ತು ವಾಹನ ಕೂಡ ಇದರೊಂದಿಗಿತ್ತು.
ಹೀಗಾಗಿ ಯಾವುದೇ ಸಂಚಾರದ ಸಮಸ್ಯೆ ಇಲ್ಲದೆ ಅಂಬ್ಯುಲೆನ್ಸ್ ಮಧ್ಯಾಹ್ನ ವೇಳೆ ಬಜ್ಪೆ ವಿಮಾನ ನಿಲ್ದಾಣಕ್ಕೆ ತಲುಪಿತು. ಬಳಿಕ ಅಲ್ಲಿಂದ ಬಾಲಕಿಯನ್ನು ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ಇದೀಗ ಬಾಲಕಿ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಮುಂದುವರಿ ಯುತ್ತಿದೆ. ಆದರೆ ಬಾಲಕಿ ಸ್ಥಿತಿ ಚಿಂತಾಜನಕವಾಗಿದೆ ಎಂದು ರವಿ ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.







