ಶಿಕ್ಷಕಿ ಮೇಲೆ ಹಲ್ಲೆ ಪ್ರಕರಣ : ಬಿಜೆಪಿ ಮುಖಂಡ ಬಂಧನ

ಬೆಂಗಳೂರು, ಡಿ.21: ಸಕಾಲಕ್ಕೆ ಬಡ್ಡಿ ನೀಡದ ಕಾರಣ ಶಾಲಾ ಶಿಕ್ಷಕಿ ಮೇಲೆ ಗಂಭೀರ ಹಲ್ಲೆ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಆರೋಪಿ ಬಿಜೆಪಿ ಮುಖಂಡ ರಾಮಕೃಷ್ಣ ಎಂಬಾತನನ್ನು ರಾಜಾನುಕುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ಸಿಂಗನಾಯಕನಹಳ್ಳಿಯ ಶಾಲೆಯ ಶಿಕ್ಷಕಿ ಆಶಾ ಎಂಬವರ ಮೇಲೆ ಡಿ.18ರ ಮಧ್ಯಾಹ್ನ ಹಲ್ಲೆ ಮಾಡಿದ್ದ ರಾಮಕೃಷ್ಣ ಆ ಬಳಿಕ ತಲೆಮರೆಸಿಕೊಂಡಿದ್ದರು. ಮೂರು ದಿನಗಳಿಂದ ಅವರ ಪತ್ತೆಗಾಗಿ ಹುಡುಕಾಟ ನಡೆಸಿ ಗುರುವಾರ ಆರೋಪಿ ಬೆಂಗಳೂರಿನಲ್ಲಿ ಸುತ್ತಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಮಕೃಷ್ಣ ಅವರ ಬಳಿ ಆಶಾ ಸಾಲದ ರೂಪದಲ್ಲಿ 70 ಸಾವಿರ ರೂ. ಪಡೆದಿದ್ದರು. ಅದಕ್ಕೆ ಪ್ರತಿಯಾಗಿ ಪ್ರತಿ ತಿಂಗಳು ಬಡ್ಡಿ ಪಾವತಿಸುತ್ತಿದ್ದರು. ಆದರೆ, ನಾಲ್ಕು ತಿಂಗಳಿನಿಂದ ಸಕಾಲಕ್ಕೆ ಬಡ್ಡಿ ಪಾವತಿಸಿರಲಿಲ್ಲ ಎಂಬ ಕಾರಣಕ್ಕೆ ಶಾಲೆಗೆ ಬಂದಿದ್ದ ಆರೋಪಿ, ಶಿಕ್ಷಕಿ ಮೇಲೆ ಹಲ್ಲೆ ಮಾಡಿದ್ದ ದೃಶ್ಯಾವಾಳಿಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.





