ಚಮ್ಮಾರರ ಶೂಗಳನ್ನು ವಿದ್ಯಾರ್ಥಿ, ಪೊಲೀಸರು ಧರಿಸುವಂತಾಗಲಿ : ಸಚಿವ ತಿಮ್ಮಾಪುರ
ಬೆಂಗಳೂರು, ಡಿ.21: ಚಮ್ಮಾರರು ತಯಾರಿಸುವ ಶೂಗಳನ್ನು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ, ಪೊಲೀಸರಿಗೆ ವಿತರಿಸುವಂತಹ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸೂಚಿಸಿದರು.
ಗುರುವಾರ ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ‘ಚರ್ಮಕುಶಲಕರ್ಮಿಗಳ ಸಬಲೀಕರಣ-ಒಂದು ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಚಮ್ಮಾರರು ನೂರಾರು ವರ್ಷಗಳಿಂದ ಚಮ್ಮಾರಿಕೆ ವೃತ್ತಿಯಲ್ಲಿ ತೊಡಗಿದ್ದಾರೆ. ಸೌಲಭ್ಯಗಳೇ ಇಲ್ಲದ ಸಂದರ್ಭದಿಂದಲೂ ಜನತೆಯ ಬೇಡಿಕೆಗಳಿಗೆ ಅನುಗುಣವಾಗಿ ಚಪ್ಪಲಿ, ಕೃಷಿ ಉತ್ಪನ್ನಗಳನ್ನು ಪೂರೈಸಿದ್ದಾರೆ. ಆದರೆ, ಇತ್ತೀಚಿಗೆ ಚರ್ಮದ ಉದ್ಯಮಕ್ಕೆ ಬೇಡಿಕೆ ಹೆಚ್ಚಾದಂತೆ ಅಂತಾರಾಷ್ಟ್ರೀಯ ಕಂಪೆನಿಗಳೇ ಎಲ್ಲ ಅವಕಾಶಗಳನ್ನು ಗಿಟ್ಟಿಸಿಕೊಂಡಿವೆ ಎಂದು ಅವರು ವಿಷಾದಿಸಿದರು.
ರಾಜ್ಯದಲ್ಲಿ ಚಮ್ಮಾರರು ನೂರಾರು ವರ್ಷಗಳಿಂದ ಹೇಗಿದ್ದರೊ, ಈಗಲೂ ಹಾಗೆಯೇ ಜೀವನ ದೂಡುತ್ತಿದ್ದಾರೆ. ಇವರ ಬದುಕು ಆಮೂಲಾಗ್ರವಾಗಿ ಬದಲಾಗಬೇಕಾದರೆ ಚಮ್ಮಾರರು ತಯಾರಿಸಿದ ಶೂ, ಚಪ್ಪಲಿ ಸೇರಿದಂತೆ ಮತ್ತಿತರ ಪರಿಕರಗಳನ್ನು ಸರಕಾರದ ಮೂಲಕ ಸರಕಾರಿ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಣೆಯಾಗಬೇಕು. ಇದರಿಂದ ಚಮ್ಮಾರರಿಗೆ ಕೈತುಂಬ ಕೆಲಸ ಸಿಕ್ಕಿ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಲಿದೆ ಎಂದು ಅವರು ಆಶಿಸಿದರು.
ತರಬೇತಿ ಅಗತ್ಯವಿದೆ: ಕಾಲ ಹಾಗೂ ಸಂದರ್ಭಗಳು ನಿರಂತರವಾಗಿ ಬದಲಾಗುತ್ತಿರುತ್ತದೆ. ಇದಕ್ಕೆ ಹೊಂದಿಕೊಂಡರೆ ಮಾತ್ರ ಯಶಸ್ಸು ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ನೋಡುವುದಾದರೆ ನೂರಾರು ವರ್ಷಗಳಿಂದ ಚಮ್ಮಾರಿಕೆ ವೃತ್ತಿಯಲ್ಲಿ ತೊಡಗಿರುವ ಚಮ್ಮಾರರು ಆಧುನಿಕತೆಗೆ ತಕ್ಕಂತೆ ತಮ್ಮ ವೃತ್ತಿಯನ್ನು ಪರಿವರ್ತಿಸಿಕೊಂಡಿಲ್ಲ. ಹೀಗಾಗಿ ಚಮ್ಮಾರಿಕೆ ವೃತ್ತಿಯನ್ನು ಕಂಪೆನಿಗಳು ಆಕ್ರಮಿಸಿಕೊಂಡಿವೆ ಎಂದು ಅವರು ವಿಷಾದಿಸಿದರು.
ಈಗಲೂ ಕಾಲ ಮಿಂಚಿಲ್ಲ. ಚಮ್ಮಾರಿಕೆ ವೃತ್ತಿ ಸದಾ ಕಾಲ ಜೀವಂತ ಇರುವಂತಹದ್ದಾಗಿದೆ. ಹೀಗಾಗಿ ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧಿಕಾರಿಗಳು ಚಮ್ಮಾರರಿಗೆ ಸೂಕ್ತ ತರಬೇತಿ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆ ಮೂಲಕ ಚಮ್ಮಾರರು ಉದ್ಯಮಿಗಳಿಗೆ ಸರಿಸಾಟಿಯಾಗಿ ತಮ್ಮ ವೃತ್ತಿಯಲ್ಲಿ ಅಭಿವೃದ್ಧಿಗೊಳ್ಳಲು ನೆರವಾಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಓ.ಶಂಕರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಇ.ವೆಂಕಟಯ್ಯ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ ಮತ್ತಿತರರಿದ್ದರು.
ಕೇವಲ 10ಕೊಠಡಿಗಳನ್ನು ಹೊಂದಿರುವ ಕಟ್ಟಡಗಳಿಗೆ ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ತೆರೆಯಲು ದಲಿತ ಸಮುದಾಯಕ್ಕೆ ಅವಕಾಶ ಮಾಡಿಕೊಡುವಂತಹ ಕಾನೂನನ್ನು ಮುಂದಿನ ಸಚಿವ ಸಂಪುಟದ ಮುಂದಿಡಲಾಗುವುದು. ಆ ಮೂಲಕ ದಲಿತ ಸಮುದಾಯ ಕೇವಲ ಮದ್ಯವನ್ನು ಸೇವಿಸಿ ಹಣವನ್ನು ವ್ಯರ್ಥ ಮಾಡಿಕೊಳ್ಳುವುದಕ್ಕಿಂತ ಮದ್ಯವನ್ನು ಮಾರಾಟ ಮಾಡಿ ಹಣ ಮಾಡುವಂತಾಗಲಿ ಎಂಬುದು ನನ್ನ ಉದ್ದೇಶವಾಗಿದೆ.
-ಆರ್.ಬಿ.ತಿಮ್ಮಾಪುರ ಅಬಕಾರಿ ಸಚಿವ







