ಡಿ. 23: ವಿದ್ಯಾಮಾತಾ ಫೌಂಡೇಶನ್‌ನಿಂದ 'ಅತ್ಯುತ್ತಮ ಶಿಕ್ಷಕ' ಪ್ರಶಸ್ತಿ ಪ್ರದಾನ
ಪುತ್ತೂರು, ಡಿ. 21: ಗ್ರಾಮೀಣ ಭಾಗದ ಚಟುವಟಿಕೆಗಳಿಗೆ ಹೆಚ್ಚು ಆಧ್ಯತೆ ನೀಡುತ್ತಿರುವ ‘ವಿದ್ಯಾಮಾತಾ ಫೌಂಡೇಶನ್’ ವತಿಯಿಂದ 1 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನೊಳಗೊಂಡ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಪ್ರದಾನ ಸಮಾರಂಭ ಡಿ. 23 ರಂದು ಬೆಳಗ್ಗೆ 10 ಪುತ್ತೂರು ತಾಲ್ಲೂಕಿನ ಉಪ್ಪಳಿಗೆ ಇರ್ದೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ ಎಂದು ವಿದ್ಯಾಮಾತಾ ಫೌಂಡೇಶನ್ ಅಧ್ಯಕ್ಷ ಭಾಗ್ಯೇಶ್ ರೈ ಅವರು ತಿಳಿಸಿದರು.
ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇರ್ದೆ ಉಪ್ಪಳಿಗೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಕೆ ಅವರನ್ನು ತಾಲ್ಲೂಕಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಸೀಮಿತಗೊಳಿಸಿ ಈ ಆಯ್ಕೆ ಮಾಡಲಾಗಿದೆ. ಸತತವಾಗಿ ಮೂರು ಬಾರಿ ಶಾಲೆಗೆ ಶೇ.100 ಫಲಿತಾಂಶ ತಂದು ಕೊಟ್ಟಿರುವ ಶಿಕ್ಷಕ ನಾರಾಯಣ ಅವರ ಸಾಧನೆ ಮತ್ತು ಅವಿರತ ಶ್ರಮವನ್ನು ಗುರುತಿಸಿ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಶಾಸಕಿ ಶಕುಂತಳಾ ಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಜಯಕರ್ನಾಟಕ ರಾಜ್ಯ ವಕ್ತಾರ ಪ್ರಕಾಶ್ ರೈ ದೇರ್ಲ, ಜಿಲ್ಲಾ ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಯಕರ್ನಾಟಕ ತಾಲ್ಲೂಕು ಸಮಿತಿ ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಜಿಲ್ಲಾ ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಪೂಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ತಾಲ್ಲೂಕು ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ, ಉದ್ಯಮಿ ಜಯಂತ್ ನಡುಬೈಲು, ವಿದ್ಯಾಮಾತಾ ಫೌಂಡೇಶನ್ ಗೌರವ ಸಲಹೆಗಾರ ಎ.ಕೆ.ಜಯರಾಮ ರೈ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ತಿಳಿಸಿದರು.
ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕಾಗಿ ಎಪಿಎಂಸಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಶಿಕ್ಷಣ ಕ್ಷೇತ್ರದ ಸಾಧನೆ ಮಾಡಿದ ವಿವೇಕಾನಂದ ಮಹಾವಿದ್ಯಾಲಯದ ಸಂಚಾಲಕ ದೇವಿ ವಿಶ್ವನಾಥ ಭಟ್, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ನಿವೃತ್ತ ದೈಹಿಕ ಶಿಕ್ಷಕ ಜಗನ್ನಾಥ ರೈ, ಸಮಾಜಸೇವೆಗಾಗಿ ಭಾರತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಭರತ್ ಶೆಟ್ಟಿ, ಶೌರ್ಯ ಪ್ರಶಸ್ತಿ ಪಡೆದ ನೆಲ್ಯಾಡಿಯ ಸೈಂಟ್ ಜಾರ್ಜ್ ಪದವಿಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿ ನಿತಿನ್ ಕೆ.ಆರ್ ಹಾಗೂ ಇರ್ದೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹೇಮಂತ್ ಪಿ.ಟಿ ಇವರನ್ನು ಸನ್ಮಾನಿಸಲಾಗುವುದು. 10 ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದವರು ತಿಳಿಸಿದರು.
ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮದ ಮುನ್ನ ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ಸಮನ್ವಿ ರೈ ಮದಕ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದವರು ತಿಳಿಸಿದರು.
ಇರ್ದೆ ಉಪ್ಪಳಿಗೆ ಪ್ರೌಢ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಹಾಗೂ ಸದಸ್ಯ ಜತ್ತಪ್ಪ ಗೌಡ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.







