ಮಾರುಕಟ್ಟೆ ಒತ್ತಡದಿಂದ ಪಾರಂಪರಿಕ ಕಲೆಗಳೂ ದಾರಿತಪ್ಪುತ್ತಿವೆ: ಈಶ್ವರಯ್ಯ
ಮುಡಿಪುವಿನಲ್ಲಿ ‘ಸೂರಜ್ ಕಲಾಸಿರಿ-2017’ ಉತ್ಸವಕ್ಕೆ ಚಾಲನೆ

ಕೊಣಾಜೆ, ಡಿ. 21: ಇಂದು ಜಾಗತೀಕರಣದ ಭರಾಟೆಯಲ್ಲಿ ಏನೆಲ್ಲ ವಿಕಾರಗಳು ನಮ್ಮ ಜೀವನಶೈಲಿಯಲ್ಲಿ ನುಸುಳಿಕೊಂಡಿವೆ, ಮಾರುಕಟ್ಟೆಯ ಒತ್ತಡಗಳಿಂದ ನಮ್ಮ ಪಾರಂಪರಿಕ ಕಲೆಗಳೂ ಕೂಡ ದಾರಿ ತಪ್ಪುತ್ತಿವೆ. ಇಂತಹ ಸಂದರ್ಭದಲ್ಲಿ ಭಾವೈಕ್ಯ ಮತ್ತು ವ್ಯಕ್ತಿತ್ವ ವಿಕಸನ ಈ ಎರಡು ನಿಟ್ಟಿನಲ್ಲೂ ಸಾಧನೆಗೆ ಕಲೆಗಳು ಹೇಗೆ ಸಹಕರಿಸುತ್ತವೆ ಎನ್ನುವುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದು ಕಲಾ ವಿಮರ್ಶಕ, ಸಾಹಿತಿ ಈಶ್ವರಯ್ಯ ಹೇಳಿದರು.
ಅವರು ಮುಡಿಪುವಿನಲ್ಲಿ ಸೂರಜ್ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಮುಡಿಪುವಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ‘ಸೂರಜ್ ಕಲಾಸಿರಿ-2017’ ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಶಿಕ್ಷಣದ ಜೊತೆ ಸಂಸ್ಕೃತಿಯೂ ಇರಬೇಕು. ಶಿಕ್ಷಣ ಮತ್ತು ಸಂಸ್ಕೃತಿ ಇವೆರಡೂ ಅನಾವರಣಗೊಳ್ಳುವುದು ಕಲೆಯ ಮೂಲಕ. ಇಂದು ಕಲೆಯ ಸ್ವರೂಪಗಳು ಬದಲಾವಣೆಯಾಗುತ್ತಿದೆ. ಕೆಲವೊಂದು ಕಲೆಗಳಲ್ಲಿ ಪರಂಪರೆಯೂ ಮರೆಯಾಗುತ್ತಿದೆ. ಇಂದು ಎಳೆಯರು ನಮ್ಮಲ್ಲಿರುವ ಪಾರಂಪರಿಕ ಕಲೆಗಳ ಬಗ್ಗೆ ಇರುವ ಮೌಲ್ಯಗಳನ್ನು ಅರಿತುಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಕಲೆಯು ನಮ್ಮ ಅಂತರಂಗದ ಶಕ್ತಿಯನ್ನು ಅರಳಿಸುವ ಸಾಮರ್ಥ್ಯವನ್ನು ಹೊಂದಿದೆ. ಎಳವೆಯಲ್ಲಿಯೇ ಶಿಕ್ಷಣ ಸಂಸ್ಥೆಗಳು ಶಿಕ್ಷಣದೊಂದಿಗೆ ಕಲೆಯ ಬೆಳವಣಿಗೆಗೂ ಪೂರಕ ವಾತಾವರಣವನ್ನು ನಿರ್ಮಿಸಿಕೊಟ್ಟರೆ ಉತ್ತಮ ಮೌಲ್ಯಗಳೊಂದಿಗೆ ಬದುಕನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸುಜ್ಞಾನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಆಹಾರ ಸಚಿವ ಯು.ಟಿ.ಖಾದರ್ ಭಾರತವು ಇಡೀ ಜಗತ್ತಿಗೆ ಸಾಂಸ್ಕೃತಿಕವಾಗಿ ಉತ್ತಮ ಸಂದೇಶವನ್ನು ಕೊಡುವಂತಹ ದೇಶ. ಇಲ್ಲಿನ ವಿಭಿನ್ನ ಸಂಸ್ಕೃತಿಯನ್ನು ರೂಪಿಸುವ, ಶ್ರೀಮಂತಗೊಳಿಸುವ ಕೆಲಸ ಆಗಬೇಕಿದ್ದು ಮುಡಿಪುವಿನಲ್ಲಿ ಸೂರಜ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವ ಸೂರಜ್ ಕಲಾಸಿರಿ ಉತ್ಸವವು ಇಲ್ಲಿಯ ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸಿದೆ. ಈ ವರ್ಷ ಆರಂಭಗೊಂಡ ಸೂರಜ್ ವರ್ಷ ಪ್ರತೀವರ್ಷವೂ ವಿಜ್ರಂಭಣೆಯಿಂದ ನಡೆಯುವಂತಾಗಲಿ ಎಂದರು.
ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಅವರು ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಇಂತಹ ಸಾಂಸ್ಕೃತಿಕ ಉತ್ಸವದಲ್ಲಿ ನಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಾಧ್ಯ. ಇಂತಹ ಕಾರ್ಯಕ್ರಮಗಳು ನಮ್ಮ ಜಿಲ್ಲೆಯಲ್ಲಿ ಹೆಚ್ಚೆಚ್ಚು ನಡೆಯುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಆರ್ಥಿಕ ಸಮಿತಿಯ ಅಧ್ಯಕ್ಷ ಗೀತಾ ಉಚ್ಚಿಲ್, ಕ.ಸಾ.ಪ.ದ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ರಾಮಚಂದ್ರ ಕುಲಕರ್ಣಿ, ಸಮಿತಿಯ ಉಪಾಧ್ಯಕ್ಷ ಚಂದ್ರಹಾಸ್ ಕರ್ಕೇರ, ಸಮಿತಿಯ ಉಪಾಧ್ಯಕ್ಷ ಪ್ರಶಾಂತ್ ಕಾಜವ, ಸಮಿತಿ ಉಪಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಅಂಬರೀಷ್ ರೇವಣ್ಕರ್, ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ, ಕುರ್ನಾಡು ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಗೀತಾ ಸಿ ಉಚ್ಚಿಲ್, ಖಚಾಂಚಿ ಹೇಮಲತಾ ರೇವಣ್ಕರ್, ಪಿಯೂಷ್ ಮೊಂತೆರೋ, ಬಿಪಿಕೆಪಿಯ ನಿರಂಜನ್ ಸಿ.ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಸೋಂದ ಲಕ್ಷ್ಮೀಶ ಹೆಗಡೆ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರಜ್ ಕಲಾಸಿರಿಯ ಅಧ್ಯಕ್ಷರಾದ ಮಂಜುನಾಥ್ ರೇವಣ್ಕರ್ ಅವರು ಸ್ವಾಗತಿಸಿದರು. ಬಾಸ್ಕರ ರೈ ಕುಕ್ಕುವಳ್ಳಿ ನಿರೂಪಿಸಿದರು. ಮಮತಾ ಗಟ್ಟಿ ಅವರು ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮುಡಿಪು ಜಂಕ್ಷನ್‌ನಿಂದ ಸೂರಜ್ ಶಿಕ್ಷಣ ಸಂಸ್ಥೆಯ ವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.







