‘ಪ್ರಯೋಗದ ಮೂಲಕ ರಂಗಕಲೆ ಬೆಳೆಯಬೇಕು’
ಕೆಮ್ತೂರು ತುಳು ನಾಟಕ ಪರ್ಬ ಉದ್ಘಾಟನೆ

ಉಡುಪಿ, ಡಿ.21: ರಂಗಭೂಮಿ, ರಂಗಕಲೆಯಲ್ಲಿ ಇಂದು ಅನೇಕ ಪ್ರಯೋಗ ಗಳಾಗುತ್ತಿವೆ. ಇಂಥ ಪ್ರಯೋಗಗಳ ಮೂಲಕ ರಂಗಕಲೆಗಳು ಬೆಳೆಯುತ್ತಾ ಹೋಗುತ್ತದೆ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಅಭಿಪ್ರಾಯ ಪಟ್ಟಿದ್ದಾರೆ.
ತುಳುಕೂಟ ಉಡುಪಿ ಇದರ ಆಶ್ರಯದಲ್ಲಿ ಕೆಮ್ತೂರು ದೊಡ್ಡಣ ಶೆಟ್ಟಿ ನೆನಪಿನಲ್ಲಿ ನಡೆದಿರುವ 16ನೇ ವರ್ಷದ ಕೆಮ್ತೂರು ತುಳು ನಾಟಕ ಪರ್ಬವನ್ನು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಗುರುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿಯಲ್ಲಿ ಕನ್ನಡ, ತುಳು, ಕೊಂಕಣಿ ಭಾಷೆಯು ತನ್ನದೇ ಆದ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗಳನ್ನು ಹೊಂದಿದೆ. ಇವುಗಳಲ್ಲಿ ರಂಗಕಲೆ ಭಾಷಾ ಪರಿಧಿಯನ್ನು ಮೀರಿ ಜನರ ಮನಸ್ಸನ್ನು ತಟ್ಟುತ್ತದೆ. ಉಡುಪಿಯಲ್ಲಿ ಕನ್ನಡ ಮತ್ತು ತುಳು ರಂಗಭೂಮಿ ತನ್ನದೇ ಆದ ರೀತಿಯಲ್ಲಿ ಬೆಳೆಯುತಿದ್ದರೂ, ಕೊಂಕಣಿ ನಾಟಕ ಮಾತ್ರ ಜನರನ್ನು ತಲುಪಲು ವಿಫಲವಾಗಿದೆ ಎಂದರು.
ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ನಂಬಿಯಾರ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಣೇಶ್ ರಾವ್, ಮಂಗಳೂರಿನ ಕದ್ರಿ ನವನೀತ ಶೆಟ್ಟಿ, ಕೆಮ್ತೂರು ವಿಜಯಕುಮಾರ್ ಶೆಟ್ಟಿ, ನಾಟಕ ಸ್ಪರ್ಧೆಯ ಸಂಚಾಲಕ ಎಂ.ಜಿ. ಚೈತನ್ಯ ಉಪಸ್ಥಿತರಿದ್ದರು.
ತುಳುಕೂಟದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಸಂಚಾಲಕ ಪ್ರಭಾಕರ ಭಂಡಾರಿ ನಾಟಕ ಸ್ಪರ್ಧೆಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರೆ, ಉಪಾಧ್ಯಕ್ಷೆ ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಯ ಮೊದಲ ದಿನ ಸಸಿಹಿತ್ಲು ರಂಗಸುದರ್ಶನ ತಂಡದಿಂದ ಪರಮಾನಂದ ಸಾಲ್ಯಾನ್ ನಿರ್ದೇಶನದಲ್ಲಿ ‘ಒಂಜಿ ಸಿರಿ ರಡ್ಡ್ ಬೊಂಡ’ ನಾಟಕ ಪ್ರದರ್ಶನಗೊಂಡಿತು.







