ಗಮನಹರಿಸಿಲ್ಲ ಎಂಬುದು ರಾಜಕೀಯ ಪ್ರೇರಿತ ಆರೋಪ : ಸಚಿವ ರೋಷನ್‌ಬೇಗ್
ದತ್ತಜಯಂತಿ ಸಂದರ್ಭದಲ್ಲಿ ಗೋರಿ ನಾಶ

ಚಿಕ್ಕಮಗಳೂರು, ಡಿ.21: ದತ್ತ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ತಾವು ಪ್ರತೀ ಅರ್ಧಗಂಟೆಗೊಮ್ಮೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದು, ತಾವು ಆ ಬಗ್ಗೆ ಗಮನಹರಿಸಿಲ್ಲ ಎಂಬುವುದು ರಾಜಕೀಯ ಪ್ರೇರಿತ ಆರೋಪ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೋಷನ್‌ಬೇಗ್ ಪ್ರತಿಕ್ರಿಯಿಸಿದ್ದಾರೆ.
ಅವರು ಗುರುವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ದತ್ತ ಜಯಂತಿಯನ್ನು ಎಸ್ಪಿಅವರು ಉತ್ತಮವಾಗಿ ನಿರ್ವಹಿಸಿದ್ದಾರೆ. ಆದರೆ ‘ಗೋರಿ ನಾಶವಾದರೆ ದುರಸ್ತಿಪಡಿಸಬಹುದು. ಪೊಲೀಸರಿಗೆ ಏನಾದರೂ ಆದರೆ ಯಾರು ಹೊಣೆ’ ಎಂದು ಅವರು ಹೇಳಿರುವುದು ತಮ್ಮ ಗಮನಕ್ಕೆ ಬಂದಿರಲಿಲ್ಲ. ಅವರು ಹಾಗೆ ಹೇಳಬಾರದು. ಆ ಬಗ್ಗೆ ಅವರ ಬಳಿ ಮಾತನಾಡುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ದತ್ತ ಜಯಂತಿಯಂದು ಕೆಲವರು ಬಾಂಬ್ ಹೊಂದಿದ್ದರು. ಆದರೆ ಸರಕಾರದ ಒತ್ತಡದಿಂದ ಅವರ ವಿರುದ್ಧ ಕ್ರಮತೆಗೆದುಕೊಂಡಿಲ್ಲ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ತಾವು ಯಾವುದೇ ಜಾತಿ, ಧರ್ಮ ನೋಡುವುದಿಲ್ಲ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವುದು ಪೊಲೀಸರ ಕರ್ತವ್ಯ ಎಂದು ಹೇಳಿದರು.
ವಿಜಯಪುರದಲ್ಲಿ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಆ ಪ್ರಕರಣ ಖಂಡಿಸಲು ಶಬ್ದಗಳಿಲ್ಲ. ಅಂತಹ ಘಟನೆ ನಡೆಯಬಾರದು. ಮುಖ್ಯಮಂತ್ರಿ ಆಕೆಯ ಮನೆಗೆ ಭೇಟಿ ನೀಡಿದ್ದಾರೆ ಎಂದು ಹೇಳಿದರು.







