ಜಿಲ್ಲೆಯಲ್ಲಿ ಹೈನುಗಾರಿಕೆಗೆ ಉಜ್ವಲ ಭವಿಷ್ಯ: ಎಸ್.ರಮೇಶ್

ಮಣಿಪಾಲ, ಡಿ.21: ಉಡುಪಿ ಜಿಲ್ಲೆಯಲ್ಲಿ ಕೃಷಿ ಅದರಲ್ಲೂ ಭತ್ತದ ಕೃಷಿ ಇಳಿಮುಖವಾಗಿದೆ. ತೋಟಗಾರಿಕಾ ಬೆಳೆಗಳತ್ತ ಜನ ಹೆಚ್ಚು ಆಸಕ್ತಿ ತೋರಿಸುತಿದ್ದಾರೆ. ಆದರೆ ಹೈನುಗಾರಿಕೆಗೆ ಉಡುಪಿ ಜಿಲ್ಲೆಯಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ನಬಾರ್ಡ್‌ನ ಸಹಾಯಕ ಮಹಾಪ್ರಬಂಧಕ ಎಸ್. ರಮೇಶ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ನಡೆದ ಉಡುಪಿ ಜಿಲ್ಲೆಯ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಯ ಪಥದಲ್ಲಿದೆ. ದ.ಕ.ಜಿಲ್ಲಾ ಹಾಲು ಉತ್ಪಾದಕರ ಫೆಡರೇಷನ್ ಉಪ್ಪೂರಿನಲ್ಲಿ ಹೊಸ ಡೈರಿ ಪ್ಲಾಂಟ್‌ನ್ನು ಸ್ಥಾಪಿಸಲಿರುವುದರಿಂದ ಹೈನುಗಾರಿಕೆಗೆ ಒಳ್ಳೆಯ ಉತ್ತೇಜನ ದೊರೆಯುವಂತಾ ಗಿದೆ. ಹೀಗಾಗಿ ಬ್ಯಾಂಕುಗಳು ಡೈರಿ ಸೊಸೈಟಿಗಳಿಗೆ ಸಾಲ ನೀಡಬಹುದಾಗಿದೆ ಎಂದವರು ಹೇಳಿದರು.
ಮೀನುಗಾರಿಕೆಯಲ್ಲೂ ಜಿಲ್ಲೆಯಲ್ಲಿ ನೀಲ ಕ್ರಾಂತಿಗೆ ಅವಕಾಶವಿದೆ. ಅದೇ ರೀತಿ ಸಣ್ಣ, ಮಧ್ಯಮ ಹಾಗೂ ಅತಿ ಸಣ್ಣ ಕೈಗಾರಿಕೆ (ಎಂಎಸ್‌ಎಂಇ)ಗಳಿಗೂ ಇಲ್ಲಿ ಒಳ್ಳೆಯ ಅವಕಾಶವಿದೆ. ಜಿಲ್ಲೆಯಲ್ಲಿ ಸಾಲ ಮರುಪಾವತಿಯೂ ಉತ್ತಮವಾಗಿರುವುದರಿಂದ ಬ್ಯಾಂಕುಗಳು ಸಾಲ ನೀಡುವ ಬಗ್ಗೆ ಹೆಚ್ಚಿನ ವುುತುವರ್ಜಿ ವಹಿಸಬಹುದು ಎಂದರು.
ದಿಕ್ಸೂಚಿ ಭಾಷಣ ಮಾಡಿದ ಲೀಡ್‌ಬ್ಯಾಂಕ್ ಸಿಂಡಿಕೇಟ್ ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯ ಉಪಮಹಾಪ್ರಬಂಧಕ ಎಸ್.ಎಸ್.ಹೆಗ್ಡೆ, ಜಿಲ್ಲೆಯ ಎಲ್ಲ ಬ್ಯಾಂಕ್‌ಗಳಲ್ಲಿ ಎರಡನೇ ತ್ರೈಮಾಸಿಕ ಅಂತ್ಯದಲ್ಲಿ ಒಟ್ಟು 21,530 ಕೋಟಿ ರೂ ಠೇವಣಿ ಸಂಗ್ರಹವಿದ್ದು, 10730 ಕೋಟಿ ರೂ. ಮುಂಗಡ ನೀಡಲಾಗಿದೆ ಎಂದರು.
ಎರಡನೆ ತ್ರೈಮಾಸಿಕ ಅಂತ್ಯದಲ್ಲಿ ಜಿಲ್ಲೆಯ ಬ್ಯಾಂಕ್‌ಗಳು ಠೇವಣಿ ಸಂಗ್ರಹ ದಲ್ಲಿ ಶೇ.13.54ರಷ್ಟು ಪ್ರಗತಿ ಸಾಧಿಸಿದ್ದು, ಮುಂಗಡದಲ್ಲಿ ಶೇ.8.68 ಪ್ರಗತಿ ಸಾಧಿಸಲಾಗಿದೆ. ಈ ಅವಧಿಯಲ್ಲಿ ವಾರ್ಷಿಕ ಗುರಿಯಾದ 7340 ಕೋಟಿ ರೂ. ಸಾಲದ ಗುರಿಯಲ್ಲಿ 3667 ಕೋಟಿ ರೂ. ವಿತರಿಸಿ ಶೇ.50ರಷ್ಟು ಸಾಧನೆ ಮಾಡಲಾಗಿದೆ.
ಇವುಗಳಲ್ಲಿ ಕೃಷಿ ಕ್ಷೇತ್ರಕ್ಕೆ 1337 ಕೋಟಿ ಸಾಲ ನೀಡಿದರೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 911 ಕೋಟಿ ರೂ., ಶೈಕ್ಷಣಿಕ ಕ್ಷೇತ್ರಕ್ಕೆ 43.11 ಕೋಟಿ, ವಸತಿ ಕ್ಷೇತ್ರಕ್ಕೆ 219.22 ಕೋಟಿ ಸಾಲ ವಿತರಿಸಲಾಗಿದೆ. ಹೀಗೆ ಆದ್ಯತಾ ವಲಯಕ್ಕೆ 2820.75 ಕೋಟಿ ರೂ. ಹಾಗೂ ಆದ್ಯತೇತರ ವಲಯಕ್ಕೆ 845.95 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ಫ್ರಾನ್ಸಿಸ್ ಬೋರ್ಗಿಯಾ ಮಾತನಾಡಿ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 20011 ಮಂದಿಗೆ 215.18 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಪಾಶಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕ ಗೋಪಾಲ ಟಿ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್-ನಬಾರ್ಡ್- ಉಡುಪಿ ಜಿಲ್ಲೆಯ 2018-19ನೇ ಸಾಲಿನ ಸಂಭಾವ್ಯ ಸಂಯೋಜಿತ ಸಾಲ ಯೋಜನೆಯ (ಪಿಎಲ್‌ಪಿ) ಮಾಹಿತಿ ಪುಸ್ತಕವನ್ನು ಜಿಪಂ ಸಿಇಓ ಶಿವಾನಂದ ಕಾಪಶಿ ಬಿಡುಗಡೆಗೊಳಿಸಿದರು. ಇದರಲ್ಲಿ ಆದ್ಯತಾ ವಲಯಕ್ಕೆ 7505.63 ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದು ಕಳೆದ ಸಾಲಿಗಿಂದ ಶೇ.15ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಇದು 6520.09 ಕೋಟಿ ರೂ.ಗಳಾಗಿತ್ತು.







