ದಾನಮ್ಮ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ಎಸ್‌ಡಿಪಿಐ ಧರಣಿ

ಸಿದ್ದಾಪುರ (ಕೊಡಗು), ಡಿ.21: ವಿಜಯಪುರ ನಗರದಲ್ಲಿ ಡಿ.19ರಂದು ಹಾಡಹಗಲೇ 9ನೇ ತರಗತಿ ವಿದ್ಯಾರ್ಥಿನಿ ದಾನಮ್ಮ ಯಾನೆ ದಾನೇಶ್ವರಿ ಎಂಬ ಶಾಲಾ ಬಾಲಕಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ, ಇಂತಹವುಗಳನ್ನು ತಡೆಯುವಲ್ಲಿ ಸರಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಇಲ್ಲಿನ ಬಸ್ ನಿಲ್ದಾಣದಲ್ಲಿ ಧರಣಿ ನಡೆಸಿದರು.
ಈ ಪ್ರಕರಣವು ಕರ್ನಾಟಕದ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಇತ್ತೀಚೆಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಇಂತಹ ಕ್ರೂರವಾದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ದಾನಮ್ಮಳಂತಹ ಅಮಾಯಕ ಬಾಲಕಿಯರು ದುಷ್ಟರ, ಪುಂಡರ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದಾರೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಮುಸ್ತಫ ಮಾತನಾಡಿ, ಸರಕಾರ ಈ ಕೂಡಲೇ ಇಂತಹ ಪ್ರಕರಣದಲ್ಲಿ ತನಿಖೆಯಲ್ಲಿ ಮತ್ತು ನ್ಯಾಯದಾನದಲ್ಲಿ ಯಾವುದೇ ವಿಳಂಬವಾಗದಂತೆ ಕಠಿಣ ಕ್ರಮಗಳಿಗೆ ಮುಂದಾಗಬೇಕು ವಿಚಾರಣೆಯನ್ನು ಶೀಘ್ರದಲ್ಲಿ ಮುಗಿಸಿ, ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.





