ಇವಿಎಂಗಳ ವಿಶ್ವಾಸಾರ್ಹತೆ ಪರೀಕ್ಷಿಸುವುದು ಉತ್ತಮ: ಪ್ರಿಯಾಂಕ್ ಖರ್ಗೆ

ಬೆಂಗಳೂರು, ಡಿ.21: ಇಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳ ವಿಶ್ವಾಸಾರ್ಹತೆ ಕುರಿತು ತಾಂತ್ರಿಕ ತಜ್ಞರ ಮೂಲಕ ಪರೀಕ್ಷೆಗೊಳಪಡಿಸುವುದು ಉತ್ತಮ ಎಂದು ಐಟಿ, ಬಿಟಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅಭಿಪಾಯಪಟ್ಟರು.
ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಂಗಳಲ್ಲಿ ಯಾವುದಾದರೂ ಲೋಪಗಳು ಕಂಡು ಬಂದರೆ ಅದನ್ನು ತಿದ್ದಿಕೊಳ್ಳಬಹುದು. ಲೋಪಗಳು ಇಲ್ಲದಿದ್ದರೆ ಒಳ್ಳೆಯದು. ಜನರಿಗೆ ಪ್ರಜಾಪ್ರಭುತ್ವದ ಮೇಲೆ ಮತ್ತಷ್ಟು ನಂಬಿಕೆ ಬರುತ್ತದೆ ಎಂದರು.
ಬಿಜೆಪಿ, ಕಾಂಗ್ರೆಸ್ ಅಥವಾ ಆಮ್ ಆದ್ಮಿ ಪಕ್ಷಗಳಲ್ಲಿ ಯಾರೊಬ್ಬರೂ ತಾಂತ್ರಿಕವಾಗಿ ಅಷ್ಟು ಸಬಲರಿಲ್ಲ. ತಾಂತ್ರಿಕ ತಜ್ಞರಿಂದ ಇವಿಎಂಗಳನ್ನು ಪರಿಶೀಲನೆ ಮಾಡಿದರೆ, ಜನರಲ್ಲಿರುವ ಮನೆ ಮಾಡಿರುವ ಸಂಶಯಗಳು ದೂರವಾಗಬಹುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಪಂಚಾಯತ್ ನಿಂದ ಸಂಸತ್ತಿನವರೆಗೆ ಎಲ್ಲ ಹಂತದ ಚುನಾವಣೆಗಳಿಗೆ ಇವಿಎಂಗಳನ್ನು ಬಳಕೆ ಮಾಡುತ್ತಿದ್ದೇವೆ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಬ್ಬ ಅಭ್ಯರ್ಥಿಗೆ ಆತನ ಮತವೇ ಬಿದ್ದಿರಲಿಲ್ಲ. ಇಂತಹ ಪರಿಸ್ಥಿತಿ ಇದೆ ಎಂದು ಅವರು ತಿಳಿಸಿದರು.
ಇವಿಎಂಗಳನ್ನು ಬಳಸುವುದು ಬೇಡ ಎನ್ನುವುದಿಲ್ಲ. ಆದರೆ, ತಾಂತ್ರಿಕ ದೋಷಗಳಿದ್ದರೆ ಅದನ್ನು ತಿದ್ದೋಣ ಎನ್ನುವುದಷ್ಟೇ ನಮ್ಮ ಬೇಡಿಕೆ. ಅದು ಸಾಧ್ಯವಾಗದಿದ್ದರೆ ಬ್ಯಾಲೆಟ್ ಪೇಪರ್ ಮೊರೆ ಹೋಗಬೇಕಿದೆ. ನಾವು ಅಸಾಂವಿಧಾನಿಕವಾದ ಬೇಡಿಕೆಯನ್ನು ಮುಂದಿಡುತ್ತಿಲ್ಲವಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ನಮ್ಮ ಬೇಡಿಕೆ, ಸಲಹೆಗೆ ಕೇಂದ್ರ ಚುನಾವಣಾ ಆಯೋಗ ಒಪ್ಪಬೇಕಲ್ಲ. ಅದು ಕೇಂದ್ರ ಸರಕಾರದ ಕೈಗೊಂಬೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ರಸ್ತೆ ಬದಿ ಕೇಂದ್ರಗಳ ನಿರ್ಮಾಣ: ರಾಜ್ಯದ 12 ಕಡೆ ತಲಾ ಎರಡು ಎಕರೆ ಪ್ರದೇಶದಲ್ಲಿ ರಸ್ತೆ ಬದಿ ಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಫುಡ್ ಕೋರ್ಟ್, ಶೌಚಾಲಯ, ವಾಹನ ದುರಸ್ಥಿ ಸೇರಿದಂತೆ ಹೆದ್ದಾರಿಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಜನವರಿ ಎರಡನೇ ವಾರದಲ್ಲಿ ಮುಖ್ಯಮಂತ್ರಿಯ ಕಾಲಾವಕಾಶ ನೋಡಿಕೊಂಡು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಪ್ರಾಯೋಗಿಕವಾಗಿ ಕಲಬುರಗಿ ಹಾಗೂ ಚಿತ್ರದುರ್ಗಗಳಲ್ಲಿ ಈ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಮಹಾದಾಯಿ ಬಿಜೆಪಿ ಗಿಮಿಕ್ :
ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬಿಜೆಪಿ ನಡೆಸುತ್ತಿರುವ ಪ್ರಯತ್ನ ರಾಜಕೀಯ ಗಿಮಿಕ್. ರಾಜ್ಯ ಸರಕಾರದ ವಿರುದ್ಧ ಯಾವುದೇ ಗಂಭೀರ ಆರೋಪಗಳು ಇಲ್ಲದೆ ಇರುವುದರಿಂದ ಬಿಜೆಪಿ ಇಂತಹ ಗಿಮಿಕ್‌ಗಳ ಮೊರೆ ಹೋಗಿದೆ. ಮಹಾದಾಯಿ ವಿಚಾರದಲ್ಲಿ ಸರಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ನ್ಯಾಯಾಧಿಕರಣದ ಹೊರಗೆ ಈ ಸಮಸ್ಯೆಯನ್ನು ಬಗೆಹರಿಸಬೇಕು.
-ಪ್ರಿಯಾಂಕ್ ಖರ್ಗೆ ಐಟಿ, ಬಿಟಿ ಹಾಗೂ ಪ್ರವಾಸೋದ್ಯಮ ಸಚಿವ







