ಅತ್ಯಾಚಾರ ಸಮಕಾಲೀನ ಪ್ರಭುತ್ವದ ಅಧಿಕೃತ ಧೋರಣೆ: ಜಿ.ರಾಜಶೇಖರ್
ವಿಜಯಪುರದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಖಂಡಿಸಿ ಧರಣಿ

ಉಡುಪಿ, ಡಿ.21: ಗುಜರಾತ್, ಕಾಶ್ಮೀರ, ಉತ್ತರ ಪ್ರದೇಶದ ಮುಝಫರಾಬಾದ್‌ಗಳಲ್ಲಿ ಮುಸ್ಲಿಮ್ ಮಹಿಳೆಯರ ಹಾಗೂ ಜಾರ್ಖಂಡ್, ಛತ್ತೀಸ್‌ಗಡ್ ನಲ್ಲಿ ಆದಿವಾಸಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರವು ಭಾರತದ ಸಮಕಾಲೀನ ಪ್ರಭುತ್ವದ ಅಧಿಕೃತ ಧೋರಣೆಯಾಗಿದೆ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಕಟುವಾಗಿ ಟೀಕಿಸಿದ್ದಾರೆ.
ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಉಡುಪಿ ಜಿಲ್ಲೆ ಮತ್ತು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಮಹಾ ಒಕ್ಕೂಟ ಉಡುಪಿ ಜಿಲ್ಲೆಯ ವತಿಯಿಂದ ವಿಜಯಪುರದ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಗುರುವಾರ ಉಡುಪಿ ಅಜ್ಜರಕಾಡುವಿನ ಹುತ್ಮಾತ ಸ್ಮಾರಕ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಹೆಣ್ಣು ಎಂಬುದು ಒಂದು ಜೀವ ಅಲ್ಲ, ಮನಸ್ಸು ಅಲ್ಲ, ಆತ್ಮ ಅಲ್ಲ. ಕೇವಲ ದೇಹ ಮಾತ್ರ ಎಂಬ ಧೋರಣೆಯು ಅತ್ಯಾಚಾರದ ಹಿಂದೆ ಕೆಲಸ ಮಾಡುತ್ತದೆ. ಹೆಣ್ಣಿನ ಮೇಲಿನ ಅತ್ಯಾಚಾರವು ಆಕೆಯ ಅಸ್ತಿತ್ವದ ನಿರಾಕರಣೆಯಾಗಿದೆ ಎಂದ ಅವರು, ವಿಜಯಪುರ ಬಾಲಕಿ ಮೇಲಿನ ಅತ್ಯಾಚಾರದ ಪ್ರಕರಣದ ಹಿಂದೆ ಹಿಂದುತ್ವವಾದಿ ನಾಯಕ ಇರುವುದು ನಿಜವಾದರೆ ಅದು ಹಿಂದುತ್ವ ಸಿದ್ಧಾಂತದ ಸೋಗಲಾಡಿತವನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.
ಸಂಘಪರಿವಾರದವರು ಮಹಿಳೆಯರನ್ನು ಮಾತೆಯರು ಎಂದು ಹೇಳುತ್ತಾರೆ. ಆದರೆ ಸುತ್ತಮುತ್ತಲಿನ ಮಹಿಳೆಯರನ್ನು ಬರೀ ದೇಹಗಳಾಗಿ ನೋಡುತ್ತಾರೆ. ದೇವತೆ, ದುರ್ಗೆ, ಮಾತೆ ಎಂಬುದಾಗಿ ವೈಭವೀಕರಣ ಜೊತೆಗೆ ಸುತ್ತಮುತ್ತಲ ರಕ್ತ ಮಾಂಸದ ಮಹಿಳೆಯರನ್ನು ಅಮಾನುಷವಾಗಿ ನೋಡುವ ಈ ದ್ವಿಮುಖ ಪ್ರವೃತ್ತಿ ಸಂಘಪರಿವಾರದ ಸಂಸ್ಕೃತಿಯ ಲಕ್ಷ್ಮಣವಾಗಿದೆ ಎಂದು ಅವರು ದೂರಿದರು.
ದಲಿತ ಮುಖಂಡ ಸುಂದರ ಮಾಸ್ತರ್ ಮಾತನಾಡಿ, ಹೊನ್ನಾವರದಲ್ಲಿ ಮೇಸ್ತ ಸಾವಿನ ಹೆಸರಿನಲ್ಲಿ ರಾಜಕೀಯ ನಡೆಸಿ ಬೆಂಕಿ ಹಚ್ಚಿರುವ ಸಂಘಪರಿವಾರದ ನಾಯಕರು ಈಗ ಎಲ್ಲಿದ್ದಾರೆ. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂದು ಹೇಳುವ ಸಂಘಪರಿವಾರದ ನಾಯಕರಿಗೆ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ದಲಿತ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಕೇವಲ ಪರಿಹಾರ ಕೊಟ್ಟು ಮುಚ್ಚಿ ಹಾಕುವ ಕೆಲಸವನ್ನು ಸರಕಾರಗಳು ಮಾಡುತ್ತಿವೆ. ಆದುದರಿಂದ ರಾಜ್ಯ ಸರಕಾರ ಈ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಗಳನ್ನು ಕೂಡಲೇ ಬಂಧಿಸಬೇಕು. ಆ ಮೂಲಕ ಬಾಲಕಿಯ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು. ದಲಿತ ದೌರ್ಜನ್ಯ ಕಾಯಿದೆಯನ್ನು ಬಲಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಜಮಾಅತೆ ಇಸ್ಲಾಮೀ ಹಿಂದ್‌ನ ಅಕ್ಬರ್ ಅಲಿ, ದಲಿತ ಮುಖಂಡ ಶೇಖರ್ ಹೆಜ್ಮಾಡಿ, ಹೋರಾಟಗಾರ ಹರ್ಷ ಕುಮಾರ್ ಕುಗ್ವೆ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಶ್ಯಾಮ್‌ರಾಜ್ ಬಿರ್ತಿ, ವಿ.ಮಂಜುನಾಥ್, ಪ್ರೊ.ಫಣಿರಾಜ್, ಮಂಜುನಾಥ್ ಬಾಳ್ಕುದ್ರು, ರಮೇಶ್ ಕೋಟ್ಯಾನ್, ರಿಯಾಝ್ ಅಹ್ಮದ್, ಅಬ್ದುಲ್ ಅಝೀಝ್, ಹುಸೇನ್ ಕೋಡಿಬೆಂಗ್ರೆ, ಸಿರಿಲ್ ಮಥಾಯಸ್ ಮೊದಲಾದವರು ಉಪಸ್ಥಿತರಿದ್ದರು.







