ಜನ ಔಷಧಿ ಕೇಂದ್ರದಲ್ಲಿ ಇತರ ಬ್ರಾಂಡ್ ಮಾರಾಟ ಮಾಡಿದರೆ ಪರವಾನಿಗೆ ರದ್ದು: ಡಾ.ಅನಿಲಾ

ಉಡುಪಿ, ಡಿ.21: ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಔಷಧ ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳಲ್ಲಿ ಬೇರೆ ಬ್ರಾಂಡಿನ ಔಷಧಿಗಳನ್ನು ಮಾರಾಟ ಮಾಡಿದರೆ 24 ಗಂಟೆಯೊಳಗೆ ಆ ಕೇಂದ್ರದ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದು ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆಯ ಮಾರು ಕಟ್ಟೆ ಅಧಿಕಾರಿ ಡಾ.ಅನಿಲಾ ತಿಳಿಸಿದ್ದಾರೆ.
ಉಡುಪಿ ಬಳಕೆದಾರರ ವೇದಿಕೆ ಹಾಗೂ ಸದ್ಗುರು ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಗುರುವಾರ ಕಿದಿಯೂರು ಹೊಟೇಲಿನ ಮಹಾಜನ ಹಾಲ್‌ನಲ್ಲಿ ಆಯೋಜಿಸಲಾದ ಜೆನರಿಕ್ ಔಷಧಿ- ಭಾರತೀಯ ಜನ ಔಷಧಿ ಪರಿಯೋಜನೆ ಕುರಿತ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ದಲ್ಲಿ ಅವರು ಮಾತನಾಡುತಿದ್ದರು.
ಈ ಯೋಜನೆಯು 2008ರಲ್ಲಿ ಪ್ರಾರಂಭಗೊಂಡಿದ್ದು, ಆಗ ದೇಶಾದ್ಯಂತ ಕೇವಲ 99 ಕೇಂದ್ರಗಳಿದ್ದವು. 2016ರಲ್ಲಿ ಅವುಗಳ ಸಂಖ್ಯೆ 269ಕ್ಕೆ ಹೆಚ್ಚಳವಾ ಯಿತು. ಇದೀಗ ದೇಶಾದ್ಯಂತ ಒಟ್ಟು 3016 ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳಿವೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 210 ಕೇಂದ್ರಗಳಿದ್ದು, ಇದು ದೇಶದಲ್ಲಿ ಐದನೆ ಸ್ಥಾನದಲ್ಲಿದೆ ಎಂದರು.
ಭಾರತದಲ್ಲಿರುವ 10 ಸಾವಿರ ಔಷಧಿ ತಯಾರಿಕಾ ಕಂಪೆನಿಗಳ ಪೈಕಿ 1400 ಕಂಪೆನಿಗಳು ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣಪತ್ರಗಳನ್ನು ಪಡೆದಿರುತ್ತವೆ. ಆ ಕಂಪೆನಿಗಳಲ್ಲಿ ಜೆನರಿಕ್ ಔಷಧಿಗಳನ್ನು ತಯಾರಿಸಿ ಎನ್‌ಎಬಿಎಲ್ ಲ್ಯಾಬ್ ನಲ್ಲಿ ಅವುಗಳ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಬಳಿಕ ತಜ್ಞರ ತಂಡ ಈ ಮಾದರಿಯನ್ನು ಪರೀಕ್ಷಿಸುತ್ತದೆ. ನಂತರವೇ ಔಷಧಗಳನ್ನು ಮಳಿಗೆಗಳಿಗೆ ಸರಬ ರಾಜು ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಪ್ರಸ್ತುತ ಜನ ಔಷಧಿ ಕೇಂದ್ರಗಳಲ್ಲಿ ಔಷಧಿಯ ಕೊರತೆಗಳಿದ್ದು, ಅದನ್ನು ಸರಿಪಡಿಸಬೇಕಾದರೆ ಇನ್ನು ನಾಲ್ಕೈದು ತಿಂಗಳು ಬೇಕಾಗುತ್ತದೆ. ಕೆಲವು ವೈದ್ಯರು ಈ ಔಷಧಿ ಬಗ್ಗೆ ಅಪಪ್ರಚಾರ ಮಾಡಿದರೆ, ಇನ್ನು ಕೆಲವು ವೈದ್ಯರು ಇದೇ ಔಷಧವನ್ನು ತಮ್ಮ ರೋಗಿಗಳಿಗೆ ಬರೆದುಕೊಡುತ್ತಿದ್ದಾರೆ. ಶ್ರೀಮಂತರಿಗೆ ಅಲ್ಲದಿ ದ್ದರೂ ಬಡವರಿಗೆ ಜೆನರಿಕ್ ಔಷಧಿಗಳನ್ನೇ ಬರೆದುಕೊಡಬೇಕು ಎಂದು ಅವರು ವೈದ್ಯರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಉಪಸ್ಥಿತರಿದ್ದರು. ಬಳಕೆದಾರರ ವೇದಿಕೆಯ ಸಂಚಾಲಕ ದಾಮೋದರ್ ಐತಾಳ್ ಸ್ವಾಗತಿಸಿದರು. ಬಿ.ಎನ್.ಶಾಂತಾಪ್ರಿಯ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಸವಿತಾ ಶಾಂತಾಪ್ರಿಯ ಕಾರ್ಯಕ್ರಮ ನಿರೂಪಿಸಿದರು.
ಹಿಂದಿನ ಪ್ರಧಾನಿ ಹೆಸರು ಉಲ್ಲೇಖಿಸದಿದ್ದಕ್ಕೆ ಆಕ್ಷೇಪ
2008ರಲ್ಲಿ ಆರಂಭಗೊಂಡ ಜನ ಔಷಧಿ ಯೋಜನೆಯ ಕುರಿತು ಡಾ. ಅನಿಲಾ ವಿಶೇಷ ಉಪನ್ಯಾಸ ನೀಡುವಾಗ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಮಾತ್ರ ಉಲ್ಲೇಖಿಸುತ್ತಿದ್ದರು. ಸಂವಾದ ಮುಗಿಯುತ್ತಿದ್ದಂತೆ ಬಳಕೆದಾರರ ವೇದಿಕೆಯ ಅಲ್ತಾಫ್ ಅಹ್ಮದ್, ಮೋದಿಯನ್ನು ಮಾತ್ರ ಹೊಗಳುವ ನೀವು ಈ ಯೋಜನೆಯನ್ನು ಆರಂಭಿಸಿದ ಪ್ರಧಾನಿ ಮನಮೋಹನ ಸಿಂಗ್ ಅವರ ಹೆಸರನ್ನು ಯಾಕೆ ಉಲ್ಲೇಖಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಡಾ.ಅನಿಲಾ, ನಾನು ರಾಜಕೀಯವಾಗಿ ಮಾತನಾಡಲು ಬಂದಿಲ್ಲ. ಮೋದಿ ನಮ್ಮ ಪ್ರಧಾನಿಯಾಗಿದ್ದಾರೆ ಎಂದರು. ಆದರೆ ಈ ಉತ್ತರದಿಂದ ಸಮಾಧಾನಗೊಳ್ಳದ ಅಲ್ತಾಫ್ ಅಹ್ಮದ್ ತಮ್ಮ ವಾದ ಮುಂದುವರೆಸಿದರು. ಆಗ ಸಂಘಟಕ ಶಾಂತಪ್ರಿಯ ಅಲ್ತಾಫ್ ಅವರ ಮಾತಿಗೆ ಸ್ಪಷ್ಟನೆ ನೀಡಲು ಮುಂದಾದರು. ಕೆಲವರು ಅಲ್ತಾಫ್ ಮೇಲೆ ಮುಗಿಬಿದ್ದರು. ಇದರಿಂದ ಇಡೀ ಸಭೆಯಲ್ಲಿ ಗದ್ದಲ ಉಂಟಾಯಿತು. ಬಳಿಕ ಸಭೆಯಲ್ಲಿದ್ದ ಹಿರಿಯರು ಎಲ್ಲರನ್ನು ಸಮಾಧಾನ ಪಡಿಸಿದರು.







