ಉಡುಪಿ: ಸರ್ವ ಧರ್ಮ ಕ್ರಿಸ್‌ಮಸ್ ಆಚರಣೆ

ಉಡುಪಿ, ಡಿ.21: ಕೆಥೊಲಿಕ್ ಸಭಾ ಸೌಹಾರ್ದ ಸಮಿತಿ ಉಡುಪಿ ಘಟಕ, ಉಡುಪಿ ಶೋಕಮಾತಾ ಇಗರ್ಜಿ ಹಾಗೂ ಉಡುಪಿ ಲಯನ್ಸ್ ಕ್ಲಬ್‌ಗಳ ಸಹಯೋಗದಲ್ಲಿ ಸರ್ವ ಧರ್ಮ ಕ್ರಿಸ್‌ಮಸ್ ಆಚರಣೆ ಚರ್ಚ್‌ನ ವಠಾರದಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಮಾತನಾಡಿ, ಧರ್ಮ ಎಂಬುದನ್ನು ನಾವೇ ನಿರ್ಧರಿಸಬೇಕೇ ಹೊರತು ಇನ್ನೊಬ್ಬರಲ್ಲ. ನಮಗೆ ಯಾವುದೂ ಸರಿ ಕಾಣು ತ್ತದೆಯೋ ಅದುವೇ ನಮ್ಮ ಧರ್ಮ ಆಗಬೇಕು. ನೀರು, ಬೆಂಕಿ, ಗಾಳಿಯ ಧರ್ಮದಂತೆ ನಾವು ಬದುಕುವುದರ ಜೊತೆಗೆ ಇನ್ನೊಬ್ಬರನ್ನು ಬದುಕಲು ಬಿಡುವುದೇ ಮಾನವ ಧರ್ಮ. ಅದಕ್ಕಿಂತ ಶ್ರೇಷ್ಠವಾದ ಧರ್ಮ ಈ ಭೂಮಿ ಯಲ್ಲಿ ಬೇರೆ ಇಲ್ಲ ಎಂದರು.
ಇಂದು ಮಾನವೀಯತೆ ಹಾಗೂ ಸೌಹಾರ್ದತೆ ಮರೆಯಾಗುತ್ತಿದೆ. ಇದನ್ನು ಉಳಿಸಿಕೊಳ್ಳದಿದ್ದರೆ ಮುಂದಿನ ಜನಾಂಗಕ್ಕೆ ಭಯಾನಕವಾದ ಭಾರತವನ್ನು ಬಿಟ್ಟು ಹೋಗಬೇಕಾದೀತು. ರಾಷ್ಟ್ರೀಯ ವಿಚಾರದಲ್ಲಿ ನಾವೆಲ್ಲರೂ ಧರ್ಮ, ಜಾತಿ, ಭೇದವನ್ನು ಮರೆತು ಒಂದಾಗಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಶೋಕಮಾತಾ ಇಗರ್ಜಿ ಪ್ರಧಾನ ಧರ್ಮಗುರು ವಲೇರಿ ಯನ್ ಮೆಂಡೊನ್ಸಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂಬಾಡಿ ಕ್ರಿಸ್ತ ದೇವಾಲಯದ ಪಾಸ್ಟರ್ ಎಡ್ವಿನ್ ಜೋಸೆಫ್, ಮೂಳೂರು ಅಲ್ ಇಹ್ಸಾನ್‌ನ ಅಧ್ಯಾಪಕ ಮಹಮ್ಮದ್ ರಖೀಬ್ ಉಪಸ್ಥಿತರಿದ್ದರು.
ಮೈಕಲ್ ಡಿಸೋಜ ಸ್ವಾಗತಿಸಿದರು. ಚಾರ್ಲ್ಸ್ ಆಂಬ್ಲರ್ ವಂದಿಸಿದರು. ಅಲ್ಫೋನ್ಸ್ ಡಿಕೋಸ್ಟ ಕಾರ್ಯಕ್ರಮ ನಿರೂಪಿಸಿದರು. ವಿಶೇಷ ಆಕರ್ಷಣೆಯಾಗಿ ಬೃಹತ್ ಗಾತ್ರದ ಕ್ರಿಸ್‌ಮಸ್ ಟ್ರೀ, ನಕ್ಷತ್ರಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯ ಕ್ರಮಗಳು, ಕ್ರಿಸ್‌ಮಸ್ ಗೀತೆ ಗಾಯನ, ಕೇಕ್ ವಿತರಣೆ ನಡೆಯಿತು.







