ಕರಿಮೆಣಸು ವ್ಯಾಪಾರದ ಬಗ್ಗೆ ಜಾಲತಾಣಗಳಲ್ಲಿ ಅಪಪ್ರಚಾರ: ಅಹ್ಮದ್
ಪೊನ್ನಂಪೇಟೆ, ಡಿ.21: ಗೋಣಿಕೊಪ್ಪಲಿನಲ್ಲಿ ನಡೆದ ವಿಯೆಟ್ನಾಂ ಕರಿಮೆಣಸು ಪ್ರಕರಣದ ಮುಖ್ಯ ಸೂತ್ರಧಾರಿಯಾಗಿ ತಮ್ಮನ್ನು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ಈ ಎಲ್ಲಾ ಅಪಪ್ರಚಾರಗಳು ಸತ್ಯಕ್ಕೆ ದೂರವಾಗಿದ್ದು, ಕೊಡಗಿನ ಬೆಳೆಗಾರರಿಗೆ ವಂಚಿಸುವ ಯಾವುದೇ ಕೃತ್ಯವನ್ನು ತಾವು ಮಾಡಿಲ್ಲ ಎಂದು ಗೋಣಿಕೊಪ್ಪಲಿನ ಹಿರಿಯ ಕರಿಮೆಣಸು ವರ್ತಕ, ಜೆನಿತ್ ಟ್ರೇಡರ್ಸ್ ಮಾಲಕ ಕೆ. ಅಹ್ಮದ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷಗಳಿಂದ ಗೋಣಿಕೊಪ್ಪಲಿನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಾ ಬೆಳೆಗಾರರ ವಿಶ್ವಾಸಾರ್ಹತೆಯನ್ನು ಬೆಳೆಸಿಕೊಂಡಿರುವ ತಮ್ಮ ಸಂಸ್ಥೆಯಿಂದ ವಿಯೆಟ್ನಾಂನ ಕನಿಷ್ಠ 100 ಗ್ರಾಂ. ಕಾಳುಮೆಣಸು ಕೂಡ ವ್ಯಾಪಾರ ನಡೆಸಿಲ್ಲ. ಇದರ ಅಗತ್ಯವೂ ತಮಗಿಲ್ಲ. ಬೆಳೆಗಾರರ ಪದಾರ್ಥಗಳಿಗೆ ಸದಾ ಮಾರುಕಟ್ಟೆಯಲ್ಲಿರುವ ನ್ಯಾಯೋಚಿತ ಬೆಲೆಯನ್ನು ನೀಡುತ್ತಾ ಬಂದಿದ್ದೇವೆ. ಆದರೂ ದುರುದ್ದೇಶಪೂರಿತವಾಗಿ ತಮ್ಮನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ವಾಟ್ಸ್ ಆ್ಯಪ್‌ಗಳಲ್ಲಿನ ಹರಿದಾಡುತ್ತಿರುವ ವಿಷಯ ಸಂಪೂರ್ಣ ಆಧಾರ ರಹಿತವಾಗಿದೆ. ಅಲ್ಲದೇ ಕಪೋಲಕಲ್ಪಿತವಾದದ್ದು ಎಂದು ಹೇಳಿದರು.
ಕೊಡಗಿನ ಹಲವಾರು ಪ್ರಾಮಾಣಿಕ ಮತ್ತು ಪ್ರಜ್ಞಾವಂತ ರೈತ ಸಮೂಹದಿಂದ ತಮ್ಮನ್ನು ಬೇರ್ಪಡಿಸಿ ದೂರ ಮಾಡುವ ದುರುದ್ದೇಶದಿಂದ ಗುಂಪೊಂದು ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.





