ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪಕ್ಷಭೇದ ಸರಿಯಲ್ಲ : ಸಚಿವ ಕಾಗೋಡು ತಿಮ್ಮಪ್ಪ

ಭಟ್ಕಳ, ಡಿ.21: ಮೂಲಭೂತ ಸೌಕರ್ಯಗಳು ಕಲ್ಪಿಸುವ ಸಂದರ್ಭದಲ್ಲಿ ಪಕ್ಷ, ಪಂಗಡ, ಓಟಿನ ದೃಷ್ಟಿ ಬದಿಗಿಟ್ಟು ಸಮಾಜ ಸೇವೆಯ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಬುಧವಾರ ಸಂಜೆ ತಾಲೂಕಿನ ಹಾಡವಳ್ಳಿ ಸಮೀಪದ ಸಾಗರ ತಾಲೂಕಿನ ಆರ್ಕಳದಲ್ಲಿ ಜರುಗಿದ ನಮ್ಮ ಗ್ರಾಮ ನಮ್ಮ ರಸ್ತೆ ಹಂತ-4ರ ಯೋಜನೆಯಡಿ ಆರ್ಕಳದಿಂದ ಸಾಗರ-ಭಟ್ಕಳ ತಾಲೂಕಿನ ಗಡಿ ತನಕದ 3.11 ಕಿ.ಮೀ. ಅಳತೆಯ 2.43 ಕೋಟಿ ರೂ. ಮೊತ್ತದ ರಸ್ತೆ ಅಭಿವೃದ್ಧಿ ಮತ್ತು ಡಾಂಬರಿಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಕಾಮಗಾರಿ ಹಂತದಲ್ಲಿ ಗುಣ ಮಟ್ಟ ಗಮನಿಸುತ್ತಿರಬೇಕು. ಕಳಪೆ ಕಂಡು ಬಂದಲ್ಲಿ ನೇರವಾಗಿ ತನ್ನ ಗಮನಕ್ಕೆ ತರಲು ತಿಳಿಸಿದರು.ಹಾಡವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಶೆಟ್ಟಿ ಸಚಿವರನ್ನು ಸನ್ಮಾನಿಸಿದರು.
ವೇದಿಕೆಯಲ್ಲಿ ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ತಾಳಗುಪ್ಪ ಜಿಲ್ಲಾ ಪಂಚಾಯತ್ ಸದಸ್ಯ ರಾಜಶೇಖರ ಗಾಳಿಪುರ, ಚನ್ನಗೊಂಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಆರತಿ ಉದಯಕುಮಾರ, ಉಪಾಧ್ಯಕ್ಷ ವಿಜಯಕುಮಾರ, ಎಪಿಎಂಸಿ ಸದಸ್ಯ ಕೇಶವ ಗೊಂಡ, ಗ್ರಾಮ ಪಂಚಾಯತ್ ಸದಸ್ಯೆ ಸವಿತಾ ಕೃಷ್ಣ ಗೊಂಡ, ಹಾಡವಳ್ಳಿ ಗ್ರಾಮ ಪಂಚಾಯತ್ ಸದಸ್ಯ ಗಣೇಶ ನಾಯ್ಕ, ಸೋಮಯ್ಯ ಗೊಂಡ ಮತ್ತಿತರರು ಉಪಸ್ಥಿತರಿದ್ದರು.







