ಕರ್ತವ್ಯ ಪ್ರಜ್ಞೆ ಮೆರೆದ ಆರ್‌ಪಿಎಫ್ ಸಿಬ್ಬಂದಿ
ಕಾರವಾರ, ಡಿ.21: ರೈಲಿನಲ್ಲಿ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಒಂದನ್ನು ಆಸ್ಟ್ರೇಲಿಯಾದ ಮಹಿಳೆಯೋರ್ವಳು ಮರೆತು ಬಿಟ್ಟಿದ್ದು ಅದನ್ನು ಇಲ್ಲಿನ ಆರ್‌ಪಿಎಫ್ ಸಿಬ್ಬಂದಿ ಆಕೆಗೆ ಮರಳಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಭಾರತ ಪ್ರವಾಸದಲ್ಲಿದ್ದ ಆಸ್ಟ್ರೇಲಿಯಾದ ಮೆಲ್ಬೋರ್ನ್ ನ ಎಮೀ ಲೊಮಾಕ್ಸ್ ಎಂಬವವರು ಮಡಗಾಂವ ರೈಲು ನಿಲ್ದಾಣದಲ್ಲಿ ಮುಂಬೈಗೆ ತೆರಳಲು ಮಾಂಡೋವಿ ಎಕ್ಸ್‌ಪ್ರೆಸ್ ಬದಲಿಗೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್‌ನಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲನ್ನು ಹತ್ತಿದ್ದರು.
ರೈಲು ಚಲಿಸಲು ಪ್ರಾರಂಭಿಸಿ ದಾಗ ಬದಲಿ ರೈಲು ಹತ್ತಿರುವುದು ಆಕೆಯ ಅರಿವಿಗೆ ಬಂತು. ಅವರು ತುರಾತುರಿಯಲ್ಲಿ ಬ್ಯಾಗ್ ಮರೆತು ತಕ್ಷಣ ಚಲಿಸುತ್ತಿದ್ದ ರೈಲಿನಿಂದ ಕೆಳಕ್ಕೆ ಜಿಗಿದಿದ್ದರು.
ಬಳಿಕ ಈ ಬಗ್ಗೆ ಮಡಗಾಂವ್ ರೈಲು ನಿಲ್ದಾಣದ ಆರ್‌ಪಿಎಫ್ ಸಿಬ್ಬಂದಿಗೆ ಅವರು ದೂರು ನೀಡಿದ್ದಾರೆ. ತಕ್ಷಣ ಅಲ್ಲಿನ ಸಿಬ್ಬಂದಿ ತಮ್ಮ ಮುಂಬೈ ಯ ಕೇಂದ್ರ ಕಚೇರಿಗೆ ದೂರು ರವಾನಿಸಿದ್ದು, ಅಲ್ಲಿಂದ ಕಾರವಾರ ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತ ರಾದ ಇಲ್ಲಿನ ಸಿಬ್ಬಂದಿ ಎಬಿ. ವಾಘ್ ಹಾಗೂ ರೂಪಾ ನಾಯ್ಕ ರೈಲು ನಿಲ್ದಾಣ ತಲುಪುತ್ತಿದ್ದಂತೆ ಹುಡುಕಾಟ ನಡೆಸಿ ಬ್ಯಾಗ್ ಪತ್ತೆಹಚ್ಚಿದ್ದರು.







