ಉಲ್ಲಾಸ್ ಕಾರಂತ ಮಾಲಕತ್ವದ ಕಾರಿಗೆ ಬೆಂಕಿ: ಅಪಾಯದಿಂದ ಚಾಲಕ ಪಾರು

ಮಂಗಳೂರು, ಡಿ.21: ಖ್ಯಾತ ಸಾಹಿತಿ ದಿವಂಗತ ಡಾ. ಶಿವರಾಮ ಕಾರಂತರ ಪುತ್ರ ಉಲ್ಲಾಸ್ ಕಾರಂತ ಅವರ ಮಾಲಕತ್ವದ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಗುರುವಾರ ಮಧ್ಯಾಹ್ನ ಬೆಸೆಂಟ್ ಜಂಕ್ಷನ್‌ನಲ್ಲಿ ನಡೆದಿದೆ.
ಘಟನೆಯಲ್ಲಿ ಕಾರು ಭಾಗಶಃ ಸುಟ್ಟು ಹೋಗಿದೆ. ಉಲ್ಲಾಸ್ ಕಾರಂತ ಅವರು ಬೆಂಗಳೂರಿನಲ್ಲಿದ್ದು, ಮಂಗಳೂರಿಗೆ ಬಂದಾಗಲೆಲ್ಲಾ ಓಡಾಟಕ್ಕೆ ಈ ಕಾರನ್ನು ಉಪಯೋಗಿಸುತ್ತಿದ್ದರು. ಇವರ ಮಾಲಕತ್ವದ ಸ್ಯಾಂಟ್ರೊ ಕಾರನ್ನು ಚಾಲಕ ರಘು ರಾಮ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ರಘುರಾಮ್ ಅವರು ಕಾರಂತರ ಮನೆತನಕ್ಕೆ ಸೇರಿದವರಾಗಿದ್ದಾರೆ. ಮಂಗಳೂರಿನ ಬೆಸೆಂಟ್ ಕಾಲೇಜು ಸಮೀಪ ಪಿ.ವಿ.ಎಸ್.ಕಲಾಕುಂಜ ರಸ್ತೆಯಲ್ಲಿ ಅವರ ಮನೆ ಇದೆ. ಗುರುವಾರ ಮಧ್ಯಾಹ್ನ ರಘುರಾಮ್ ಅವರು ಮನೆಯಿಂದ ಕಾರನ್ನು ಚಲಾಯಿಸಿಕೊಂಡು 200 ಮೀ. ದೂರ ತಲಪುವಷ್ಟರಲ್ಲಿ ಮುಂಭಾಗದ ಬೋನೆಟ್‌ನಲ್ಲಿ ಹೊಗೆಯಾಡುತ್ತಿರುವುದು ಕಂಡು ಬಂತು. ಕೂಡಲೇ ಕಾರು ನಿಲ್ಲಿಸಿ ಅವರು ಕೆಳಗೆ ಇಳಿದಿದ್ದು, ಬಳಿಕ ಸಮೀಪದಲ್ಲಿದ್ದ ಆಟೋ ರಿಕ್ಷಾ ಚಾಲಕರ ಸಹಾಯದಿಂದ ನೀರು ಚಿಮುಕಿಲಾಯಿತು. ಬೆಂಕಿ ಶಮನವಾಗದೆ ಇದ್ದಾಗ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು. ಪಾಂಡೇಶ್ವರದ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಕಾರಿನ ಬ್ಯಾಟರಿಯಲ್ಲಿ ಶಾರ್ಟ್ ಸರ್ಕೀಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಚಾಲಕ ರಘುರಾಮ್ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







