ದೇಶದಲ್ಲಿ ಉನ್ನತಿ ಸಾಧಿಸಲು ಅಂಬೇಡ್ಕರ್ ಜೀವನವೇ ಸಾಕ್ಷಿ : ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

ಸಿದ್ದಾಪುರ (ಕೊಡಗು), ಡಿ.21: ದೇಶದಲ್ಲಿ ಉನ್ನತಿ ಸಾಧಿಸಬೇಕಾದರೆ ಶಿಕ್ಷಣ ಅತ್ಯವಶ್ಯಕ. ಇದಕ್ಕೆ ಅಂಬೇಡ್ಕರ್ ಅವರ ಜೀವನವೇ ಸಾಕ್ಷಿ ಎಂದು ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಡಾ. ನಿರ್ಮಲಾ ನಂದನಾಥ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.
ಆದಿ ಚುಂಚನಗಿರಿ ಟ್ರಸ್ಟ್ ಮತ್ತು ಸಿದ್ದಾಪುರ ಪ್ರೌಢಶಾಲೆ ಆಡಳಿತ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡ ಜಗದ್ಗುರು ನಿರ್ಮಲಾನಂದ ಸ್ವಾಮೀಜಿ ಅವರ ಪುರಪ್ರವೇಶ ಮತ್ತು ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ದಲಿತರು ಎಂಬ ಕಾರಣಕ್ಕಾಗಿ ಬಾಲ್ಯದಲ್ಲಿ ಅನೇಕ ನೋವು ಅನುಭವಿಸಿದ ವ್ಯಕ್ತಿಯಾಗಿದ್ದು, ಅವರು ಜೀವನದಲ್ಲಿ ಕೊರಗುತಾ ಕೂರಲಿಲ್ಲ. ಬದಲಾಗಿ ಶಿಕ್ಷಣದ ಮೂಲಕ ಜ್ಞಾನ ಸಂಪಾದಿಸಿ ತಮ್ಮನ್ನು ತುಳಿದವರಿಗೆ ಉತ್ತರ ನೀಡಿದ್ದಾರೆ. ಅವರ ಸಾಧನೆಯನ್ನು ಮೆಚ್ಚಿ ಇಂಗ್ಲೆಂಡ್ ದೇಶದಲ್ಲಿ ಅವರ ಮೂರ್ತಿ ಸ್ಥಾಪಿಸಿರುವುದು ಭಾರತೀಯರ ಹೆಮ್ಮೆ ಎಂದರು.
ಆಧುನಿಕ ವಿದ್ಯೆಯ ಜೊತೆಗೆ ಆದ್ಯಾತ್ಮಿಕ ವಿದ್ಯೆ ಕೂಡಾ ಅಗತ್ಯವಾಗಿದ್ದು, ಸಿದ್ದಾಪುರ ಪ್ರೌಢ ಶಾಲೆಯನ್ನು ನಾವು ದತ್ತು ಪಡೆದಿದ್ದು ಎರಡೂ ವಿದ್ಯೆಯನ್ನು ಕಲಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಬೋಧ ಸ್ವರೂಪಾನಂದ ಸ್ವಾಮೀಜಿ ,ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭ ಸಿದ್ದಾಪುರ ಜಮಾಅತ್ ಅಧ್ಯಕ್ಷ ಉಸ್ಮಾನ್ ಹಾಜಿ, ಆದಿ ಚುಂಚನಗಿರಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮಿ, ಕಾವೇರಿ ಆಶ್ರಮದ ವಿವೇಕಾನಂದ ಸ್ವಾಮಿ, ಆದಿ ಚುಂಚನಗಿರಿ ಮಠದ ವಿವಿಧ ಶಾಖಾ ಮಠದ ಸ್ವಾಮಿಗಳು, ಸಿದ್ದಾಪುರ ಪ್ರೌಢಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಪಿ.ಸಿ ಕುಶಾಲಪ್ಪ, ಶಿಕ್ಷಕರು, ಪೋಷಕರು, ಪೂರ್ವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.







