ಕಿವೀಸ್ ಸರಣಿಗೆ ಜುನೈದ್ ಅಲಭ್ಯ

ಕರಾಚಿ, ಡಿ.21: ಪಾಕಿಸ್ತಾನ ಕ್ರಿಕೆಟ್ ತಂಡ ನ್ಯೂಝಿಲೆಂಡ್ ಪ್ರವಾಸಕ್ಕೆ ಮುನ್ನ ಮತ್ತೊಂದು ಹಿನ್ನಡೆ ಅನುಭವಿಸಿದೆ. ತಂಡದ ಎಡಗೈ ವೇಗದ ಬೌಲರ್ ಜುನೈದ್ ಖಾನ್ ಗಾಯದ ಸಮಸ್ಯೆಯ ಕಾರಣ ಕಿವೀಸ್ ವಿರುದ್ಧ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಈ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್‌ನ ವೇಗದ ಬೌಲಿಂಗ್ ವಿಭಾಗದಲ್ಲಿದ್ದ ಖಾನ್‌ಗೆ ವೈದ್ಯರು ನಾಲ್ಕು ವಾರಗಳ ಕಾಲ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ.
''ಸ್ಕ್ಯಾನಿಂಗ್ ವರದಿಯಲ್ಲಿ ಅವರ ಕಾಲಿನಲ್ಲಿ ಗಾಯವಾಗಿರುವುದು ಗೊತ್ತಾಗಿದೆ. ಅವರು ಗುಣಮುಖರಾಗಲು ಕನಿಷ್ಠ 4 ವಾರಗಳ ಅಗತ್ಯವಿದೆ'' ಎಂದು ಪಾಕ್ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುನೈದ್ ಖಾನ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಖುಲ್ನಾ ಟೈಟಾನ್ಸ್ ಪರ ಆಡುತ್ತಿದ್ದಾಗ ಗಾಯಗೊಂಡಿದ್ದಾರೆ. ಪಾಕ್‌ಗೆ ವಾಪಸಾದ ಬಳಿಕ ಖಾನ್ ಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು. ಸ್ಕಾನಿಂಗ್‌ನಲ್ಲಿ ಗಾಯದ ಗಂಭೀರತೆ ಅರಿವಾಗಿದೆ. 27ರ ಹರೆಯದ ಜುನೈದ್ ಖಾನ್ ಪಾಕ್ ಪರ 22 ಟೆಸ್ಟ್ ಹಾಗೂ 66 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಪಾಕ್ ತಂಡ ಈಗಾಗಲೇ ಇನ್ನೋರ್ವ ಎಡಗೈ ವೇಗಿ ಉಸ್ಮಾನ್ ಶಿನ್ವಾರಿ ಸೇವೆಯಿಂದ ವಂಚಿತವಾಗಿದೆ.
ಪಾಕ್ ತಂಡ ಜ.6 ರಂದು ನ್ಯೂಝಿಲೆಂಡ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಆಡಲಿದೆ. ಜ.22 ಹಾಗೂ 28 ರ ನಡುವೆ ಟ್ವೆಂಟಿ-20 ಸರಣಿಯನ್ನು ಆಡುತ್ತದೆ.







