ಸರಕಾರದ ಯೋಜನೆಗಳ ಲಾಭ ರೈತರಿಗೆ ದೊರಕಲು ಆಗ್ರಹಿಸಿ ಧರಣಿ
ಕೊಳ್ಳೇಗಾಲ, ಡಿ.21: ಫಸಲ್ ಭೀಮಾ ಯೋಜನೆ ಹಾಗೂ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಗಳು ರೈತರ ಹಾಗೂ ಕೃಷಿ ಕಾರ್ಮಿಕರಿಗೆ ಅನುಕೂಲವಾಗಲಿ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕ ಹಾಗೂ ಲಂಚ ಮುಕ್ತ ವೇದಿಕೆಯ ವತಿಯಿಂದ ಗುರುವಾರ ಧರಣಿ ನಡೆಸಲಾಯಿತು.
ಪಟ್ಟಣದ ಆರ್‌ಎಂಸಿ ಆವರಣದಲ್ಲಿ ರೈತ ಮುಖಂಡರು ಸಭೆ ನಡೆಸಿ ನಂತರ, ಮೆರವಣಿಗೆಯ ಮೂಲಕ ತೆರಳಿ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ರೈತ ಮುಖಂಡ ಶೈಲೇಂದ್ರ ಮಾತನಾಡಿ, ಪ್ರಧಾನಮಂತ್ರಿ ಫಸಲ್ ಯೋಜನೆಯು ಯಾವುದೇ ರೀತಿಯಲ್ಲಿ ಅನುಕೂಲಕರವಾಗಿಲ್ಲ. ರೈತರ ಬೆಳೆಗೆ ಪ್ರತ್ಯೇಕ ವಿಮೆ ದೊರೆಯಬೇಕು ಎಂದರು.
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯು ಜನಪ್ರತಿನಿಧೀಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೇಬು ತುಂಬುತ್ತಿದೆ. ಈ ಯೋಜನೆಯು ದುರುಪಯೋಗವಾಗುತ್ತಿದೆ ಎಂದು ದೂರಿದರು.
ಧರಣಿಯಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್, ರೈತ ಸಂಘದ ರಾಜ್ಯ ಪದಾಧಿಕಾರಿ ಮಹೇಶ್‌ಪ್ರಭು, ಜಿಲ್ಲಾಧ್ಯಕ್ಷ ಶಿವರಾಮ, ನಾಗರಾಜು, ರಾಜು, ರವಿನಾಯ್ಡು, ಶಿವಮಲ್ಲು, ಯಾಳಕ್ಕಿಗೌಡ, ಲಂಚ ಮುಕ್ತ ವೇದಿಕೆಯ ಜಿಲ್ಲಾಧ್ಯಕ್ಷ ಮಾಂಬಳ್ಳಿ ಮೋಹನ್‌ಕುಮಾರ್ ಮತ್ತಿತರರು ಪಾಲ್ಗೊಂಡರು





