ಬಾಲಕಿಯ ಚಿಕಿತ್ಸೆಗಾಗಿ ಧನ ಸಹಾಯಕ್ಕೆ ಮನವಿ

ಪಡುಬಿದ್ರೆ, ಡಿ. 22: ಕೇವಲ ಐದು ವರ್ಷ ಪ್ರಾಯದ ಬಾಲಕಿ ರಕ್ತ ಕ್ಯಾನ್ಸರ್ ರೋಗದಿಂದ ಬಳಲುತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾಳೆ. ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ಕೂಲಿ ಕಾರ್ಮಿಕ ತಂದೆ ಚಿಕಿತ್ಸೆಗೆ ಖರ್ಚಾಗಲಿರುವ ಲಕ್ಷಾಂತರ ರೂ. ಭರಿಸಲು ಸಾಧ್ಯವಾಗದೆ ದಾನಿಗಳ ಸಹಕಾರಕ್ಕೆ ಸಹಾಯಕ್ಕೆ ಮನವಿ ಮಾಡಿದ್ದಾರೆ.
ಪಲಿಮಾರು ಗ್ರಾಮದ ಕರ್ನಿಕರ ಕಟ್ಟೆ ಬಳಿಯ ನಿವಾಸಿ ಕೂಲಿ ಕಾರ್ಮಿಕ ವಸಂತ ಪೂಜಾರಿ ಮತ್ತು ವಸಂತಿ ದಂಪತಿಯ ಏಕೈಕ ಪುತ್ರಿ ವಂಶಿಕ (5) ರಕ್ತದ ಕ್ಯಾನ್ಸರ್‌ಗೆ ತುತ್ತಾಗಿದ್ದಾಳೆ. ಈಕೆಯ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗುವಿನ ಚಿಕಿತ್ಸೆಗೆ ಸುಮಾರು 10 ಲಕ್ಷ ರೂ. ವೆಚ್ಚವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಮಗುವಿನ ಹೆತ್ತವರಿಗೆ ಇಷ್ಟೊಂದು ಮೊತ್ತವನ್ನು ಸಂಗ್ರಹಿಸಲು ಅಸಾಧ್ಯವಾಗಿದ್ದು, ಚಿಕಿತ್ಸೆಗಾಗಿ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಕುಟುಂಬವು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೂ, ಬಾಲಕಿಯಾಗಿರುವುದರಿಂದ ಕ್ಯಾನ್ಸರ್ ಚಿಕಿತ್ಸೆಗೆ ಸರಕಾರದ ಯಾವುದೇ ಯೋಜನೆಗಳು ಲಭಿಸುತ್ತಿಲ್ಲವೆಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಮಗು ಅಂಗನವಾಡಿಗೆ ಹೋಗುತ್ತಿದೆ. ಅಲ್ಲಿಗೆ ಸಂಬಂಧಿಸಿದ ಯಾವುದೇ ಯೋಜನೆಗಳೂ ಸಿಗುವುದು ಕಷ್ಟಸಾಧ್ಯವಾಗಿದೆ ಎಂದು ವಂಶಿಕಾ ತಂದೆ ಅಳಲು ತೋಡಿಕೊಂಡಿದ್ದಾರೆ.
ಮಗುವಿನ ತಾಯಿ ಕೂಡಾ ಕಳೆದ ನಾಲ್ಕು ತಿಂಗಳ ಹಿಂದೆ ಅವಘಡ ಸಂಭವಿಸಿ ಪಾದದ ಮೂಳೆ ಮುರಿತಕ್ಕೊಳಗಾಗಿ ನಡೆಯಲಾಗದ ಪರಿಸ್ಥಿತಿಯಲ್ಲಿದ್ದಾರೆ. ಕಡು ಬಡತನದಲ್ಲಿ ಇರುವ ಈ ಕುಟುಂಬಕ್ಕೆ ಧನಸಹಾಯದ ಅಗತ್ಯತೆ ಇದ್ದು, ಮಗುವಿನ ಚಿಕಿತ್ಸೆಗೆ ಧನ ಸಹಾಯ ಮಾಡಲಿಚ್ಛಿಸುವವರು ವಸಂತ ಪೂಜಾರಿ ಅವರ ಸಿಂಡಿಕೇಟ್ ಬ್ಯಾಂಕ್ ಪಲಿಮಾರು ಶಾಖೆಯ ಖಾತೆ ಸಂಖ್ಯೆ-01292200034591(IFSC CODE-SYNB0000129) ಕ್ಕೆ ಸಂದಾಯ ಮಾಡಬಹುದು.







