ರಾಜಕಾರಣದಲ್ಲಿ ದಲಿತರ ಕಡೆಗಣನೆ : ಕೊಡಗು ದಸಂಸ ಆರೋಪ

ಮಡಿಕೇರಿ,ಡಿ.22 :ಕೊಡಗು ಜಿಲ್ಲೆಯಲ್ಲಿರುವ ದಲಿತ ಸಮೂಹ ಬೇರೆ ಬೇರೆ ಸಂಘಟನೆಗಳಲ್ಲಿ ಗುರುತಿಸಿಕೊಳ್ಳದೆ ಒಂದೇ ವೇದಿಕೆಯಡಿ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ತಮಗಾಗಿ ಮೀಸಲಿರುವ ಹಕ್ಕುಗಳನ್ನು ಪಡೆಯಲು ಮುಂದಾಗಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕರಾದ ಎನ್.ವೀರಭದ್ರಯ್ಯ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ರಾಜಕೀಯ ಪಕ್ಷಗಳು ಮತ ಚಲಾವಣೆಯಲ್ಲಿ ನಿರ್ಣಾಯಕರಾಗಿರುವ ದಲಿತರನ್ನು ಕಡೆಗಣಿಸಿದ್ದು, ಇದು ಖಂಡನೀಯವೆಂದರು. ಈ ಬೆಳವಣಿಗೆಯ ಬಗ್ಗೆ ಬೇಸರಗೊಂಡಿರುವ ದಲಿತ ಸಮುದಾಯ ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭ ಯಾವ ನಿರ್ಧಾರ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದು, ದಲಿತರೆಲ್ಲರೂ ಒಂದೇ ವೇದಿಕೆಯಡಿ ಮತ ಬಲಪ್ರದರ್ಶನ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಅಭಿಪ್ರಾಯಪಟ್ಟರು.
2010-11 ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 73,584 ಪರಿಶಿಷ್ಟ ಜಾತಿ ಹಾಗೂ 58,054 ಮಂದಿ ಪರಿಶಿಷ್ಟ ಪಂಗಡದ ಮಂದಿಯಿದ್ದು, ಒಟ್ಟು 1,23,0638 ಸಂಖ್ಯೆಯಾಗಿರುತ್ತದೆ. 2011 ರ ಒಟ್ಟು ಜನಸಂಖ್ಯೆ 5,54,519 ಆಗಿದ್ದು, ಶೇ.25 ರಷ್ಟು ಮಂದಿ ದಲಿತ ಜನಾಂಗದವರೇ ಆಗಿದ್ದಾರೆ. ಎಲ್ಲಾ ಪಕ್ಷಗಳಲ್ಲೂ ದಲಿತ ಜನಾಂಗದವರು ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ ಮಾತ್ರವಲ್ಲ ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ದಲಿತ ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ಮತ್ತು ಗೌರವ ದೊರೆಯುತ್ತಿಲ್ಲ ಎಂದು ವೀರಭದ್ರಯ್ಯ ಆರೋಪಿಸಿದರು.
ದಲಿತ ಬಾಂಧವರು ಕುಟ್ಟದಿಂದ ಕೊಡ್ಲಿಪೇಟೆ ವರೆಗೆ ಹಾಗೂ ಕುಶಾಲನಗರದಿಂದ ಸಂಪಾಜೆಯವರೆಗೆ ಎಲ್ಲಾ ಭಾಗಗಳಲ್ಲಿ ನೆಲೆಸಿದ್ದಾರೆ. ದಲಿತ ಮತದಾರರು ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ರಾಜಕೀಯ ಪಕ್ಷಗಳು ಜಿಲ್ಲೆಯಲ್ಲಿ ದಲಿತ ಜನಾಂಗಕ್ಕೆ ಮಹತ್ವದ ಅಧಿಕಾರವನ್ನು ನೀಡಿಲ್ಲ. ಕನಿಷ್ಠ ನಿಗಮ ಮಂಡಳಿಗಳ ಅಧ್ಯಕ್ಷರು ಅಥವಾ ನಿರ್ದೇಶಕರುಗಳ ಸ್ಥಾನಮಾನವನ್ನು ಕೂಡ ನೀಡಿಲ್ಲ ಎಂದು ಟೀಕಿಸಿದ ಅವರು, ರಾಜಕೀಯ ಪಕ್ಷಗಳು ದಲಿತರನ್ನು ಕೇವಲ ಮತಬೇಟೆಗಾಗಿ ಮಾತ್ರ ಬಳಸಿಕೊಳ್ಳುತ್ತಿದ್ದು, ಇದನ್ನು ನಮ್ಮ ಸಮುದಾಯ ಖಂಡಿಸುತ್ತದೆ ಎಂದರು.
ಕೊಡಗಿನಲ್ಲಿರುವ ಮೂಲ ನಿವಾಸಿ ಗಿರಿಜನರನ್ನು ರಾಜಕಾರಣಿಗಳು ಕಡೆಗಣಿಸುತ್ತಿದ್ದು, ಕೇವಲ ಭಾಷಣಗಳಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರ ಬಂದ ನಂತರ ದಲಿತರನ್ನು ನಿರ್ಲಕ್ಷಿಸಲಾಗುತ್ತಿದೆ. ದಲಿತ ಮೀಸಲಾತಿಯನ್ನು ಹೊರತು ಪಡಿಸಿದಂತೆ ಇತರ ಪ್ರದೇಶಗಳಲ್ಲಿ ದಲಿತ ಜನಾಂಗಕ್ಕೆ ರಾಜಕೀಯವಾಗಿ ಅವಕಾಶ ನೀಡಿದ ಉದಾಹರಣೆಗಳಿಲ್ಲ. ಕೇವಲ ದಲಿತ ಮತಗಳನ್ನು ಸೆಳೆಯುವುದಕ್ಕಾಗಿ ಮಾತ್ರ ರಾಜಕೀಯ ಪಕ್ಷಗಳು ದಲಿತರಿಗೆ ಲೆಕ್ಕಕ್ಕಿಲ್ಲದ ಪದಾಧಿಕಾರಿ ಸ್ಥಾನವನ್ನು ನೀಡಿ ವಂಚಿಸುತ್ತಿವೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ಜಾರಿಗೆ ತಾರದೆ ಇದ್ದಿದ್ದರೆ ಇಂದು ದಲಿತ ವಿದ್ಯಾರ್ಥಿಗಳು ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಿಂದ ವಂಚಿತರಾಗುತ್ತಿದ್ದರು. ಅಲ್ಲದೆ ದೇಶದಲ್ಲಿ ಮೀಸಲಾತಿ ವ್ಯವಸ್ಥೆ ಇಲ್ಲದೆ ಹೋಗಿದ್ದಲ್ಲಿ ಯಾವ ರಾಜಕೀಯ ಪಕ್ಷ ಕೂಡ ದಲಿತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಿರಲಿಲ್ಲ ಮತ್ತು ಪಕ್ಷಕ್ಕೂ ಸೇರ್ಪಡೆಗೊಳಿಸಿಕೊಳ್ಳುತ್ತಿರಲಿಲ್ಲ ಎಂದು ವೀರಭದ್ರಯ್ಯ ಆರೋಪಿಸಿದರು.
ಕೊಡಗು ಜಿಲ್ಲೆಯಲ್ಲಿ ದಲಿತ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ವಿರಾಜಪೇಟೆ ತಾಲ್ಲೂಕಿನ ಒಟ್ಟು ಜನಸಂಖ್ಯೆ 2,01,431 ರಲ್ಲಿ 53,438 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿದ್ದಾರೆ. ಎಲ್ಲಾ ವಿಧದಲ್ಲೂ ತುಳಿತಕ್ಕೊಳಗಾಗುತ್ತಿರುವ ದಲಿತರನ್ನು ಪ್ರತಿನಿಧಿಸುವ ಒಬ್ಬ ಜನಪ್ರತಿನಿಧಿಯ ಅಗತ್ಯತೆ ಎದ್ದು ಕಾಣುತ್ತಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳು ದಲಿತ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಮೂಲಕ ದಲಿತರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕೆಂದು ಅವರು ಒತ್ತಾಯಿಸಿದರು.
ದಲಿತರ ರಾಜಕೀಯ ಆಲೋಚನೆಗಳು ಬದಲಾಗಿದ್ದು, ಶೈಕ್ಷಣಿಕ ಶಕ್ತಿ ಮತ್ತು ವಿವೇಚನಾ ಶಕ್ತಿ ಉಳ್ಳವರಾಗಿದ್ದಾರೆ. ಈ ಬಾರಿ ದಲಿತ ಸಮೂಹ ಒಗ್ಗೂಡಿ ಮತ ಚಲಾವಣೆ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ವೀರಭದ್ರಯ್ಯ ಸ್ಪಷ್ಟಪಡಿಸಿದರು.
ಜಿಲ್ಲಾ ಸಂಚಾಲಕರಾದ ಹೆಚ್.ಎಲ್.ದಿವಾಕರ್ ಮಾತನಾಡಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಸುಮಾರು ಎಂಟು ಸಾವಿರ ಸದಸ್ಯರುಗಳನ್ನು ಹೊಂದಿದ್ದು, ರಾಜಕೀಯ ರಹಿತವಾಗಿ ದಲಿತರ ಶೈಕ್ಷಣಿಕ ಏಳಿಗೆಗಾಗಿ ಶ್ರಮಿಸುತ್ತಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು, ಯಾರನ್ನು ಸೋಲಿಸಬೇಕು ಎನ್ನುವುದನ್ನು ನಾವು ನಿರ್ಧರಿಸುತ್ತೇವೆ ಎಂದರು.
ದಲಿತರ ಉದ್ಧಾರಕ್ಕಾಗಿ ದಲಿತ ಸಮುದಾಯದ ರಾಜಕೀಯ ಶಕ್ತಿಯ ಅಗತ್ಯವಿದೆಯಾದರೂ ಈಗಿರುವ ರಾಜಕೀಯ ಪಕ್ಷಗಳು ದಲಿತ ಮುಖಂಡರುಗಳಿಗೆ ಅಗತ್ಯವಾದ ಗೌರವವನ್ನು ನೀಡಬೇಕೆಂದರು. ವಿವಿಧ ರಾಜಕೀಯ ಪಕ್ಷಗಳಲ್ಲಿರುವ ದಲಿತ ಪದಾಧಿಕಾರಿಗಳನ್ನು ಹಲ್ಲು ಕಿತ್ತ ಹಾವಿನಂತೆ ಬಳಸಲಾಗುತ್ತಿದ್ದು, ವೇದಿಕೆಗೆ ಕರೆಯುವ ಸೌಜನ್ಯವನ್ನು ಕೂಡ ತೋರುತ್ತಿಲ್ಲ. ಅಲ್ಲದೆ ಮಾತನಾಡಲು ಅವಕಾಶವನ್ನೂ ನೀಡದೆ ಕೇವಲ ದಲಿತ ಮತ ಸೆಳೆಯಲು ಪ್ರಮುಖರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದಿವಾಕರ್ ಟೀಕಿಸಿದರು.
ಜಿಲ್ಲೆಯಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯವನ್ನು ಯಾವ ಜನಪ್ರತನಿಧಿಯೂ ಪ್ರಶ್ನಿಸುತ್ತಿಲ್ಲ. ವರ್ಷದ ಹಿಂದೆ ನಡೆದ ಮಾದಾಪುರ ಕಾಲೇಜು ಪ್ರಾಂಶುಪಾಲರ ಆತ್ಮಹತ್ಯೆ, ಸಾಲ ಮರುಪಾವತಿಸಲಿಲ್ಲವೆಂದು ನಾಯಿಗಳನ್ನು ಬಿಟ್ಟು ಕಾರ್ಮಿಕನನ್ನು ಕಚ್ಚಿಸಿದ ಪ್ರಕರಣ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳಲ್ಲಿ ದಲಿತರಿಗೆ ನ್ಯಾಯ ಸಿಗಲಿಲ್ಲವೆಂದು ದಿವಾಕರ್ ಆರೋಪಿಸಿದರು. ಈ ಬಗ್ಗೆ ಸಮಿತಿಯು ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಂಚಾಲಕರಾದ ಹೆಚ್.ಬಿ.ರವಿ ಹಾಗೂ ತಾಲ್ಲೂಕು ಸಂಚಾಲಕರಾದ ಹೆಚ್.ಎಲ್.ಕುಮಾರ್ ಉಪಸ್ಥಿತರಿದ್ದರು.







