ಓಟಿಗಾಗಿ ಬಿಜೆಪಿ ಮಹಾದಾಯಿ ನಾಟಕ ಶುರು ಮಾಡಿದೆ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಡಿ.22: ಹೈದ್ರಾಬಾದ್ ಕರ್ನಾಟಕ ಭಾಗದ ಓಟುಗಳನ್ನು ಪಡೆಯುವ ಒಂದೇ ಉದ್ದೇಶದಿಂದ ಮಹಾದಾಯಿ ವಿಷಯದಲ್ಲಿ ಬಿಜೆಪಿ ನಾಟಕ ಮಾಡಲು ಪ್ರಾರಂಭಿಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಶುಕ್ರವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು-ನಾಲ್ಕು ವರ್ಷಗಳಿಂದ ಮಹಾದಾಯಿ ವಿಚಾರದಲ್ಲಿ ಮೌನ ವಹಿಸಿದ್ದ ರಾಜ್ಯ ಬಿಜೆಪಿ ನಾಯಕರು ಈಗ ರಾಜಕೀಯ ಉದ್ದೇಶಕ್ಕಾಗಿ ಮಹಾದಾಯಿ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ. ಇದನ್ನು ಉತ್ತರ ಕರ್ನಾಟಕ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 2015ರಿಂದ ಇಲ್ಲಿಯವರೆಗೂ ಗೋವಾ ಸರಕಾರಕ್ಕೆ 15ಕ್ಕೂ ಹೆಚ್ಚು ಪತ್ರಗಳನ್ನು ಬರೆದು ಮಹಾದಾಯಿ ವಿಷಯವನ್ನು ಮಾತುಕತೆಯ ಮೂಲಕ ಚರ್ಚೆಗೆ ಆಹ್ವಾನಿಸಿದ್ದರು. ಆ ಪತ್ರಗಳಿಗೆ ಯಾವ ಪ್ರತಿಕ್ರಿಯೆಯನ್ನೂ ಕೊಡದ ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್, ಈಗ ರಾಜಕೀಯ ದುರುದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರಿಗೆ ಪತ್ರ ಬರೆದು, ಕರ್ನಾಟಕದ ಜನತೆಯನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಚುನಾವಣೆಯ ಬಳಿಕ ಮಹಾದಾಯಿ ವಿಷಯವನ್ನು ಮಾತುಕತೆಯ ಮೂಲಕ ಚರ್ಚಿಸೋಣವೆಂದು ಗೋವಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಈ ವಾಕ್ಯದ ಸಾರಾಂಶವೇ ರಾಜಕೀಯ ಪ್ರೇರಿತವೆಂದು ಯಾರಿಗಾದರು ಅನಿಸದೆ ಇರದು. ಇಂತಹ ಸುಳ್ಳುಗಳನ್ನು ಒಂದೊಂದಾಗಿ ಪೋಣಿಸುವ ಮೂಲಕವೇ ಬಿಜೆಪಿ ಅಧಿಕಾರಕ್ಕೆ ಬರಲು ಷಡ್ಯಂತ್ರ ರೂಪಿಸುತ್ತಿದೆ ಎಂದು ಅವರು ವಿಷಾದಿಸಿದರು. ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಮುಖಂಡರಾದ ನಾಡಗೌಡ, ಎಚ್.ಸಿ.ನೀರಾವರಿ, ಬಂಡೆಪ್ಪ ಕಾಶೆಂಪೂರ್, ಹಲ್ಕೋಡ್ ಹನುಮಂತಪ್ಪ ಉಪಸ್ಥಿತರಿದ್ದರು.
ರಾಜ್ಯದ ಜನತೆಗೆ ಅವಮಾನ
ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಬಿ.ಎಸ್.ಯಡಿಯೂರಪ್ಪರಿಗೆ ಬರೆದಿರುವ ಪತ್ರದಲ್ಲಿ ರಾಜ್ಯ ಸರಕಾರದ ಮೇಲೆ ನಂಬಿಕೆಯಿಲ್ಲವೆಂದು ಹೇಳಿದ್ದಾರೆ. ಇದು ಇಡೀ ರಾಜ್ಯದ ಜನತೆಯನ್ನು ಅವಮಾನಿಸಿದಂತೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರ್ನಾಟಕ ಜನತೆಗೆ ದ್ರೋಹ ಮಾಡಲು ಮುಂದಾಗಿದ್ದಾರೆ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ







