ಗಡಿ ವಿವಾದ: ಚೀನಾ ಕೌನ್ಸಿಲರ್ ಅನ್ನು ಭೇಟಿಯಾದ ಅಜಿತ್ ಧೋವಲ್

ಹೊಸದಿಲ್ಲಿ, ಡಿ. 22: ವಾರ್ಷಿಕ ಗಡಿ ಚರ್ಚೆಯ 20ನೇ ಸುತ್ತಿನಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಧೋವಲ್ ಚೀನಾದ ಕೌನ್ಸಿಲರ್ ಯಾಂಗ್ ಜೀಚಿ ಅವರನ್ನು ಹೊಸದಿಲ್ಲಿಯಲ್ಲಿ ಶುಕ್ರವಾರ ಭೇಟಿಯಾದರು. ಡೊಕ್ಲಾದಲ್ಲಿ ಉಂಟಾದ ಘರ್ಷಣೆಯನ್ನು ಬಗೆಹರಿಸಿದ ನಂತರ ಇದೇ ಮೊದಲ ಬಾರಿ ಎರಡು ದೇಶಗಳ ಪ್ರತಿನಿಧಿಗಳು ಭೇಟಿಯಾಗುತ್ತಿದ್ದಾರೆ. ಈ ಇಬ್ಬರು ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಕ್ಸಿಯಮೆನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪರಸ್ಪರ ಭೇಟಿಯಾಗಿದ್ದರು. ದಿನವಿಡೀ ನಡೆದ ಚರ್ಚೆಯಲ್ಲಿ ಎರಡು ದೇಶಗಳ ಪ್ರತಿನಿಧಿಗಳು ಡೋಕ್ಲಾ ಸೇರಿದಂತೆ ಭಾರತ ಮತ್ತು ಚೀನಾದ ಮಧ್ಯೆ ಬಗೆಹರಿಯದೆ ಉಳಿದಿರುವ ಗಡಿ ವಿವಾದಕ್ಕೆ ಸಂಬಂಧಪಟ್ಟ ವಿಷಯಗಳನ್ನು ಪ್ರಸ್ತಾಪಿಸಿದರು.
ಧೋವಲ್ ಮತ್ತು ಜೀಚಿ ಭೇಟಿಯ ಬಗ್ಗೆ ವಿದೇಶಾಂಗ ಸಚಿವಾಲಯ ಬುಧವಾರದಂದು ಮಾಹಿತಿ ನೀಡಿತ್ತು. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆತಿಥ್ಯ ವಹಿಸಿದ್ದ ರಷ್ಯಾ-ಭಾರತ-ಚೀನಾ ನಡುವಿನ ತ್ರಿಪಕ್ಷೀಯ ಸಭೆಯು ನಡೆದ ಮರುದಿನವೇ ಎರಡು ದೇಶಗಳ ಪ್ರತಿನಿಧಿಗಳು ಭೇಟಿಯಾದರು. ಡೋಕ್ಲಾ ಸ್ಥಿತಿಯು ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ದೊಡ್ಡ ಪರೀಕ್ಷೆಯನ್ನು ಒಡ್ಡಿದ್ದು ಇಂಥ ಸ್ಥಿತಿಯು ಮುಂದೆ ಉಂಟಾಗದಂತೆ ಎರಡೂ ದೇಶಗಳು ಇದರಿಂದ ಪಾಠ ಕಲಿಯಬೇಕಿದೆ ಎಂದು ಚೀನಾ ಮಂಗಳವಾರ ತಿಳಿಸಿತ್ತು.
ಭೂತಾನ್‌ಗೆ ಸೇರಿದ್ದು ಎನ್ನಲಾದ ಭೂಪ್ರದೇಶದಲ್ಲಿ ಚೀನಾವು ರಸ್ತೆಯನ್ನು ನಿರ್ಮಿಸಲು ಮುಂದಾದ ಹಿನ್ನೆಲೆಯಲ್ಲಿ ಜೂನ್ 16ರಂದು ಡೋಕ್ಲಾದಲ್ಲಿ ಎರಡೂ ದೇಶಗಳ ಸೇನೆಯು ಮುಖಾಮುಖಿಯಾಗಿತ್ತು. ಇದು ದೇಶದ ಭದ್ರತೆಗೆ ಮುಖ್ಯವಾಗಿ ಭಾರತವನ್ನು ಈಶಾನ್ಯ ರಾಜ್ಯಗಳ ಜೊತೆ ಸೇರಿಸುವ ಪ್ರದೇಶವಾದ ಕೋಳಿ ಕತ್ತಿಗೆ (ಚಿಕನ್ ನೆಕ್) ಅಪಾಯವನ್ನೊಡ್ಡುವ ಕಾರಣ ಭಾರತೀಯ ಸೇನೆಯು ಈ ರಸ್ತೆ ನಿರ್ಮಾಣವನ್ನು ತಡೆಯಲು ಯತ್ನಿಸಿತ್ತು. ಎರಡೂ ದೇಶಗಳ ನಡುವೆ ಪರಸ್ಪರ ಒಪ್ಪಂದ ಏರ್ಪಡುವ ಮೂಲಕ ಆಗಸ್ಟ್ 28ರಂದು ಸೇನೆಗಳ ನಡುವಿನ ಘರ್ಷಣೆ ಕೊನೆಯಾಗಿತ್ತು.







