ಸಮಯಪ್ರಜ್ಞೆಯಿಂದ ನೂರಾರು ಜನರ ಪ್ರಾಣ ಉಳಿಸಿದ 12ರ ಹರೆಯದ ಬಾಲಕ

ಪಾಟ್ನಾ, ಡಿ.22: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಮಂಗಲಪುರ್ ಗ್ರಾಮದ ಸರಕಾರಿ ಶಾಲೆಯೊಂದರ ಐದನೇ ತರಗತಿ ವಿದ್ಯಾರ್ಥಿ ಭೀಮ್ ಯಾದವ್ ದಿನಬೆಳಗಾಗುವಷ್ಟರಲ್ಲಿ ಹೀರೋ ಆಗಿ ಬಿಟ್ಟಿದ್ದಾನೆ. ಹನ್ನೆರಡು ವರ್ಷದ ಈ ಬಾಲಕ ನೂರಾರು ರೈಲ್ವೆ ಪ್ರಯಾಣಿಕರ ಪ್ರಾಣ ಉಳಿಸಿದ್ದಾನೆ. ತೋಟಕ್ಕೆ ಹೋಗುವ ಹಾದಿಯಲ್ಲಿ ರೈಲು ಹಳಿಯೊಂದು ತುಂಡಾಗಿದೆ ಎಂದು ಗಮನಿಸಿದ ಬಾಲಕ ನಡುಗುವ ಚಳಿಯಲ್ಲೂ ತನ್ನ ಕೆಂಪು ಶರ್ಟನ್ನು ಬಿಚ್ಚಿ ಅದನ್ನು ಬೀಸಿ ರೈಲು ಚಾಲಕನ ಗಮನ ಸೆಳೆದು ರೈಲನ್ನು ನಿಲ್ಲಿಸಿ ದೊಡ್ಡ ಅವಘಡವನ್ನೇ ತಪ್ಪಿಸಿದ್ದಾನೆ. ಆತನ ಈ ಸಾಹಸವನ್ನು ಮೆಚ್ಚಿ ಅಧಿಕಾರಿಗಳು ಆತನಿಗೆ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದ್ದಾರೆ.
ಗೋರಖಪುರ್-ನರ್ಕಟಿಯಗಂಜ್ ರೈಲ್ವೆ ಹಳಿಯ ಒಂದು ಭಾಗ ತುಂಡಾಗಿರುವುದನ್ನು ತನ್ನ ತೋಟಕ್ಕೆ ಹೋಗುವ ಹಾದಿಯಲ್ಲಿ ಗಮನಿಸಿದ ಬಾಲಕ ಹಳಿಯಲ್ಲಿ ಓಡಿ ತನ್ನ ಕೆಂಪು ಶರ್ಟನ್ನು ಬಿಚ್ಚಿ ರೈಲಿನತ್ತ ಬೀಸಿದ್ದ. ಅದನ್ನು ಗಮನಿಸುತ್ತಲೇ ಚಾಲಕ ಏನೋ ಸಮಸ್ಯೆಯಿದೆ ಎಂದು ಅರಿತು ವೇಗದಿಂದ ಸಾಗುತ್ತಿದ್ದ ರೈಲಿಗೆ ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ. ನಂತರವಷ್ಟೇ ಆತನಿಗೆ ರೈಲಿನ ಪ್ರಯಾಣಿಕರು ಎಂತಹ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿತ್ತು.
"ಹತ್ತಿರದ ಗ್ರಾಮದ ಬಾಲಕನೊಬ್ಬನ ಶೌರ್ಯವನ್ನು ಜನರು ಕೊಂಡಾಡುವುದನ್ನು ನೋಡಿದ್ದೆ. ಅವನಂತೆಯೇ ಏನಾದರೂ ಧೈರ್ಯದ ಕೆಲಸ ಮಾಡಬೇಕೆಂದಿದ್ದೆ. ರೈಲು ಹಳಿ ತುಂಡಾಗಿರುವುದನ್ನು ಗಮನಿಸಿ ಧೈರ್ಯದಿಂದ ಓಡಿ ರೈಲನ್ನು ನಿಲ್ಲಿಸುವಲ್ಲಿ ಸಫಲನಾದೆ'' ಎಂದು ಬಾಲಕ ಹೇಳಿದ್ದಾನೆ.
ರೈಲ್ವೆ ಅಧಿಕಾರಿಗಳು ಬಾಲಕನ ಸಾಹಸವನ್ನು ಮೆಚ್ಚಿ ಆತನಿಗೆ ನಗದು ಪ್ರಶಸ್ತಿ ಮತ್ತು ಪ್ರಮಾಣಪತ್ರ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ. ಬಾಲಕನಿಗೆ ಎಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.







