ಬಿಜೆಪಿ ಬಣ್ಣ ಬಯಲು ಮಾಡಲು ಜ.5ರಿಂದ ಜಾಗೃತಿ ಸಮಾವೇಶ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಡಿ.22: ಕೇವಲ ಓಟಿಗಾಗಿ ಬಿಜೆಪಿ ನಡೆಸುತ್ತಿರುವ ರಾಜಕೀಯ ನಾಟಕವನ್ನು ಉತ್ತರ ಕರ್ನಾಟಕದ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಜ.5ರಿಂದ ಉತ್ತರ ಕರ್ನಾಟಕದ ಪ್ರವಾಸ ಮಾಡಲಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಶುಕ್ರವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧದ ನಮ್ಮ ಜಾಗೃತಿ ಯಾತ್ರೆ ಜ.5ರಂದು ಬೆಳಗಾವಿಯಿಂದ ಪ್ರಾರಂಭಿಸಲಾಗುವುದು. ಸುಮಾರು 25ದಿನಗಳ ಕಾಲ ಉತ್ತರ ಕರ್ನಾಟಕದ ಪ್ರತಿ ತಾಲೂಕು ಹಾಗೂ ಜಿಲ್ಲೆಯಲ್ಲಿ ಸಮಾವೇಶ ನಡೆಸಿ ಬಿಜೆಪಿಯ ಬಣ್ಣವನ್ನು ಬಯಲು ಮಾಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಮಾಡುತ್ತಿರುವ ರಾಜಕೀಯ ಅವಾಂತರಗಳಿಂದಾಗಿ ಆ ಪಕ್ಷದ ಕಾರ್ಯಕರ್ತೆಯರೇ ಜೈಲಿನಲ್ಲಿ ಕೊಳೆಯುವಂತಾಗಿದೆ. ಇಂತವರು ರಾಜ್ಯದ ಜನತೆಗೆ ಏನು ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಬಿಜೆಪಿಯ ಬಣ್ಣದ ಮಾತುಗಳಿಗೆ ಮರುಳಾಗಬಾರದು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಸಮಾವೇಶ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಮಾತನಾಡುತ್ತಾ ಕಳಸಾ ಬಂಡೂರಿ ನಾಲೆಗೆ ಅನುಮತಿ ಕೊಡಲು ಎಚ್.ಡಿ.ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು. ಅವರ ಮಾತನ್ನು ಮೀರಿ ನಾನು ಜಾರಿ ಮಾಡಿದೆ ಎಂದು ಸುಳ್ಳುಗಳನ್ನು ಹರಡುತ್ತಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನಾನು ಅನುಮತಿ ಕೊಟ್ಟಿದ್ದೇ ವಿನಃ ಬಿಜೆಪಿಯಲ್ಲ. ಆ ಸಂದರ್ಭದಲ್ಲಿ ಬಿಜೆಪಿ ನಾಯಕರು ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಉದ್ದೇಶಿಸಿರುವುದನ್ನು ನನ್ನ ಬಳಿಯೇ ಹೇಳಿದ್ದಾರೆ ಎಂದು ಅವರು ಆರೋಪಿಸಿದರು.







