ಪ್ರದ್ಯುಮ್ನ ಕೊಲೆ ಪ್ರಕರಣ: ಬಾಲಾಪರಾಧಿಗೆ ಜಾಮೀನು ನೀಡದಂತೆ ಸಿಬಿಐ ಮೇಲ್ಮನವಿ

ಗುರ್‌ಗಾಂವ್, ಡಿ.22: ಇಲ್ಲಿನ ರ್ಯಾನ್ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿಯಾಗಿರುವ 16 ವರ್ಷ ಹರೆಯದ ಬಾಲಾಪರಾಧಿಗೆ ಜಾಮೀನು ನೀಡದಂತೆ ಸಿಬಿಐ ಗುರ್‌ಗಾಂವ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ.
ಆರೋಪಿಗೆ ಜಾಮೀನು ನೀಡದಂತೆ ಬಾಲಾಪರಾಧ ನ್ಯಾಯ ಮಂಡಳಿ (ಜೆಜೆಬಿ) ಯು ನೀಡಿದ ಆದೇಶದ ವಿರುದ್ಧ ಆರೋಪಿಯು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಬೀರ್ ಸಿಂಗ್ ಕುಂಡು ಜನವರಿ ಆರಕ್ಕೆ ನಿಗದಿಪಡಿಸಿದ್ದರು. ಆದರೆ ಈ ಮೇಲ್ಮನವಿಯನ್ನು ವಿರೋಧಿಸಿ ತನಿಖಾ ತಂಡವು ನ್ಯಾಯಾಲಯಕ್ಕೆ ಲಿಖಿತ ಅರ್ಜಿ ಸಲ್ಲಿಸಿದೆ. 16ಹರೆಯದ ಆರೋಪಿಯನ್ನು ವಯಸ್ಕನಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದ ಬಾಲಾಪರಾಧ ನ್ಯಾಯ ಮಂಡಳಿಯು ಆತನನ್ನು ಶುಕ್ರವಾರದಂದು ಗುರ್‌ಗಾಂವ್‌ನ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು ಸೂಚಿಸಿತ್ತು. 2015ರ ಬಾಲಾಪರಾಧ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆಯ ಪ್ರಕಾರ ಅತ್ಯಾಚಾರ, ಕೊಲೆ ಹಾಗೂ ದರೋಡೆ ಮತ್ತು ಕೊಲೆ ಮುಂತಾದ ಹೀನಾಯ ಕೃತ್ಯಗಳಿಗೆ ಸಂಬಂಧಪಟ್ಟಂತೆ ಬಾಲಾಪರಾಧಿಯ ವಯಸ್ಸನ್ನು 18ರಿಂದ 16ಕ್ಕೆ ಇಳಿಸುತ್ತದೆ. ಈ ಪ್ರಕರಣಗಳಲ್ಲಿ ಆರೋಪಿಗೆ ಕನಿಷ್ಟ ಏಳು ವರ್ಷ ಕಾರಾಗೃಹ ಶಿಕ್ಷೆ ವಿಧಿಸುವ ಸಾಧ್ಯತೆಯಿರುತ್ತದೆ. ಹಾಗಾಗಿ ಜೆಜೆಬಿ ಮೊದಲಿಗೆ ಅಪರಾಧವು ಮಕ್ಕಳ ಮಾನಸಿಕತೆಯಿಂದ ಮಾಡಲಾಗಿತ್ತೇ ಅಥವಾ ವಯಸ್ಕರ ಮಾನಸಿಕತೆಯಿಂದ ನಡೆಸಲಾಗಿತ್ತೇ ಎಂಬುದನ್ನು ನಿರ್ಧರಿಸುತ್ತದೆ. ನಂತರವಷ್ಟೇ ಆರೋಪಿಯು ಬಾಲಾಪರಾಧಿಯೇ ಅಥವಾ ವಯಸ್ಕನಾಗಿ ಆತನನ್ನು ನೋಡಬೇಕೇ ಎಂಬುದನ್ನು ಸೂಚಿಸುತ್ತದೆ. ಆರೋಪಿ ಬಾಲಕನನ್ನು ಬಾಲಾಪರಾಧಿಯಾಗಿ ಪರಿಗಣಿಸಬಾರದು ಎಂಬ ಮನವಿಯನ್ನು ಆಧರಿಸಿದ ಜೆಜೆಬಿ ಈ ಆದೇಶವನ್ನು ಹೊರಡಿಸಿತ್ತು.
ಆರೋಪಿಯು ದೋಷಿ ಎಂದು ಸಾಬೀತಾದರೆ ಆತನನ್ನು 21ರ ಹರೆಯದ ವರೆಗೆ ಬಾಲಗೃಹದಲ್ಲಿರಿಸಲಾಗುವುದು ನಂತರ ಆತನನ್ನು ಜೈಲಿಗೆ ಕಳುಹಿಸಬೇಕೇ ಅಥವಾ ಜಾಮೀನು ನೀಡಬೇಕೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಜೆಜೆಬಿ ತಿಳಿಸಿದೆ. ಸೆಪ್ಟೆಂಬರ್ 8ರಂದು ರ್ಯಾನ್ ಅಂತಾರಾಷ್ಟ್ರೀಯ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ಮೃತದೇಹ ಶಾಲೆಯ ಶೌಚಾಲಯದಲ್ಲಿ ಕತ್ತುಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಪೊಲೀಸರು ಈ ಹತ್ಯೆಯನ್ನು ಶಾಲಾ ವಾಹನದ ನಿರ್ವಾಹಕ ಮಾಡಿದ್ದಾನೆ ಎಂದು ಆರೋಪಿಸಿ ಆತನನ್ನು ಬಂಧಿಸಿದ್ದರು. ಆದರೆ ಪ್ರಕರಣ ಸಿಬಿಐಗೆ ಒಪ್ಪಿಸಿದಾಗ ಇಡೀ ಪ್ರಕರಣ ತಿರುವು ಪಡೆದಿದ್ದು ಅದೇ ಶಾಲೆಯ 11ನೇ ತರಗತಿಯಲ್ಲಿ ಕಲಿಯುತ್ತಿದ್ದ 16ರ ಹರೆಯದ ವಿದ್ಯಾರ್ಥಿ ಈ ಹತ್ಯೆ ಮಾಡಿರುವುದಾಗಿ ಸಿಬಿಐ ಆರೋಪಿಸಿತ್ತು.







