ಶೀಘ್ರದಲ್ಲಿಯೇ 18 ಸಾವಿರ ಪೊಲೀಸರ ನೇಮಕ: ರಾಮಲಿಂಗಾರೆಡ್ಡಿ

ಬೆಂಗಳೂರು, ಡಿ.22: ರಾಜ್ಯದಲ್ಲಿ ಪೋಲಿಸ್ ಸಿಬ್ಬಂದಿ ಕೊರತೆ ನೀಗಿಸಲು ರಾಜ್ಯದಲ್ಲಿ 18 ಸಾವಿರ ಪೋಲಿಸರನ್ನು ಶೀಘ್ರದಲ್ಲಿಯೇ ನೇಮಕ ಮಾಡಿ ಕೊಳ್ಳಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಶುಕ್ರವಾರ ನಗರದ ನಾಗರಬಾವಿಯಲ್ಲಿ ಪೋಲಿಸ್ ಗೃಹ 3ನೆ ಹಂತದ ಯೋಜನೆಯಡಿ 256 ಪೋಲಿಸ್ ಪೇದೆಗಳಿಗೆ ವಸತಿ ಸಮುಚ್ಚಯ ನಿರ್ಮಾಣ ಮಾಡುವ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ರಾಜ್ಯದಲ್ಲಿ 11 ಸಾವಿರ ಪೋಲಿಸ್ ವಸತಿ ಗೃಹ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದ್ದು, ಎಎಸ್ಸೈ ಅವರಿಗೆ 786 ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುಳ್ಳಿನ ಬಿಜೆಪಿ: ಬಿಜೆಪಿ ಪಕ್ಷದವರು ಕೇವಲ ಸುಳ್ಳು ಮಾಹಿತಿ ನೀಡುವ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅಂತಹ ಯಾವುದೇ ಸಮಸ್ಯೆಗಳು ಇಲ್ಲ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಶಾಸಕ ಮುನಿರತ್ನ ಮಾತನಾಡಿ, ಅನ್ನಪೂರ್ಣೇಶ್ವರಿನಗರ ಪೋಲಿಸ್ ಠಾಣೆಗೆ ನಿವೇಶನವನ್ನು ದೊರಕಿಸಿಕೊಡಲಾಗುವುದು. ಮುಂದಿನ ದಿನಗಳಲ್ಲಿ ತಮ್ಮ ಇಲಾಖಾ ವತಿಯಿಂದ ಸುಸಜ್ಜಿತ ಪೋಲಿಸ್ ಕಟ್ಟಡ ನಿರ್ಮಾಣ ಮಾಡುವ ಮೂಲಕ ಸ್ವಂತ ಕಟ್ಟಡ ಹೊಂದುವ ದಿಕ್ಕಿನತ್ತ ಪ್ರಯತ್ನ ನಡೆಸಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು, ಕರ್ನಾಟಕ ಪೋಲಿಸ್ ವಸತಿ ಗೃಹನಿರ್ಮಾಣದ ವ್ಯವಸ್ಥಾಪಕ ನಿರ್ದೇಶಕ ಎಚ್.ಸಿ.ಕಿಶೋರ್ ಚಂದ್ರ, ಬೆಂಗಳೂರು ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್, ಬಿಬಿಎಂಪಿ ಸದಸ್ಯ ಜಿ.ಮೋಹನ್ ಕುಮಾರ್, ಬೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಎಂ.ಮಂಜುನಾಥ್ ಸೇರಿ ಪ್ರಮುಖರಿದ್ದರು.







