ಸದಾಶಿವ ಆಯೋಗ ಜಾರಿಗೆ ವಿರೋಧ ಸಲ್ಲ: ಆರ್.ಮೋಹನ್‌ರಾಜ್
ಬೆಂಗಳೂರು, ಡಿ.22: ಒಳ ಮೀಸಲಾತಿ ಸಂಬಂಧ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಮಾಡಲು ಕೆಲವು ದಲಿತ ಸಂಘಟನೆಗಳು ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ದಲಿತ ಸಂಘರ್ಷ ಸಮಿತಿಯ ಕಾರ್ಯಾಧ್ಯಕ್ಷ ಆರ್.ಮೋಹನ್‌ರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗ ಎಲ್ಲ ಸಮುದಾಯಗಳನ್ನು ಭೇಟಿ ಮಾಡಿಲ್ಲ, ಸಮೀಕ್ಷೆ ಸರಿಯಾಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ, ಈ ವರದಿ ಜಾರಿ ಮಾಡಿದರೆ ದಲಿತ ಸಮುದಾಯದ ಒಗ್ಗಟ್ಟು ಒಡೆದು ಹೋಗುತ್ತದೆ ಎಂದು ವಾದ ಮಾಡುತ್ತಿದ್ದಾರೆ. ಆದರೆ, ಇದು ಜಾರಿಯಾದರೆ ದಲಿತ ಸಮುದಾಯಗಳಲ್ಲಿನ ಒಗ್ಗಟ್ಟು ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂದು ಹೇಳಿದರು.
ಹಿಂದಿನ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ, ಇದೀಗ ಅಧಿಕಾರ ಮುಗಿಯುವ ಹಂತಕ್ಕೆ ಬಂದಿದ್ದರೂ ಅದನ್ನು ಜಾರಿ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದಲಿತರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಕೂಡಲೇ ಸದಾಶಿವ ಆಯೋಗದ ವರದಿಯನ್ನು ಸಂಪುಟದಲ್ಲಿ ಮಂಡಿಸಿ ಸಾರ್ವಜನಿಕ ಚರ್ಚೆಗೆ ಒಳಪಡಿಸಿ ವರ್ಗೀಕರಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.





