ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಅಕಾಡೆಮಿ ಪರಿಶ್ರಮಿಸುತ್ತಿದೆ: ವಿನಯ ಕುಲಕರ್ಣಿ

ಧಾರವಾಡ, ಡಿ.22: ಮಕ್ಕಳಲ್ಲಿ ಚೈತನ್ಯ, ಉತ್ತಮ ವ್ಯಕ್ತಿತ್ವ ಬೆಳೆಸುವಲ್ಲಿ ಬಾಲವಿಕಾಸ ಅಕಾಡೆಮಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ನಡೆದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ
ಸಮಾರಂಭವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ರಾಜ್ಯ ಸರಕಾರದಿಂದ ಹಣಕಾಸಿನ ನೆರವು ಸೇರಿದಂತೆ ಎಲ್ಲ ರೀತಿಯ ಬೆಂಬಲ ಸಹಕಾರವನ್ನು ಬಾಲವಿಕಾಸ ಅಕಾಡೆಮಿಗೆ ನೀಡಿ ಮಾದರಿ ಅಕಾಡೆಮಿಯಾಗಿ ರೂಪಿಸುವಲ್ಲಿ ನೆರವಾಗಲಿದೆ ಎಂದು ವಿನಯಕುಲಕರ್ಣಿ ಹೇಳಿದರು.
2015ನೆ ಸಾಲಿನ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ ವಿತರಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ದೇಶಿಯ ಕಲೆಗಳಿಗೆ ಆದ್ಯತೆ ನೀಡಿ, ಹೊಸ ವಿಧಾನಗಳನ್ನು ಅನುಸರಿಸಿ ಮಕ್ಕಳನ್ನು ಹೆಚ್ಚು ಕ್ರಿಯಾಶೀಲ, ಸುಸಂಸ್ಕೃತವಾದ ವ್ಯಕ್ತಿತ್ವ ರೂಪಿಸಲು ಸರಕಾರ ಆದ್ಯತೆ ನೀಡಿ ಕಾರ್ಯಕ್ರಮಗಳನ್ನು ವಿವಿಧ ಅಕಾಡೆಮಿಗಳಿಂದ ಆಯೋಜಿಸಲಾಗುತ್ತಿದೆ ಎಂದರು.
ನಾಡೋಜ ಡಾ.ಚನ್ನವೀರ ಕಣವಿ ಮಾತನಾಡಿ, ಬಂಡಾಯ ಸಾಹಿತ್ಯ ಸೇರಿದಂತೆ ಎಲ್ಲ ಕಾಲಘಟ್ಟದಲ್ಲೂ ಮಕ್ಕಳ ಸಾಹಿತ್ಯ ಮಹತ್ವ ಪಡೆಯಲಿಲ್ಲ. ಆದರೆ, ಕನ್ನಡ ಶಾಲೆಯ ಶಿಕ್ಷಕರು ಮಕ್ಕಳ ಸಾಹಿತ್ಯ ಪ್ರೋತ್ಸಾಹ ಬೆಳೆಸಿ ಪೋಷಿಸಿದ್ದಾರೆ. ಅದರ ಶ್ರೇಯಸ್ಸು ಶಾಾ ಶಿಕ್ಷಕರಿಗೆ ಸಲ್ಲಬೇಕು ಎಂದರು.
ಪ್ರತಿ ವರ್ಷ ಸಾವಿರಾರು ಮಕ್ಕಳ ಪುಸ್ತಕ, ಸಾಹಿತ್ಯ ಕೃತಿಗಳು ಪ್ರಕಟಗೊಳ್ಳುತ್ತಿವೆ. ನಮ್ಮ ತಲೆಮಾರಿನಲ್ಲಿ ಮುಲ್ಕಿ ಪರೀಕ್ಷೆ ಪಾಸಾದ ಕನ್ನಡ ಪ್ರತಿಭಾವಂತರಿದ್ದರು. ಅನೇಕ ಕವನಗಳ ಮೂಲಕ ಬಾಲ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ನಡೆದಿದೆ. ಮಕ್ಕಳ ಸಾಹಿತ್ಯ ರಚನೆ ಸಂದರ್ಭದಲ್ಲಿ ಮೌಲ್ಯಗಳನ್ನು ಗುರುತಿಸಬೇಕು. ಮಕ್ಕಳಿಂದ ರಚನೆಗೊಂಡ ಉತ್ತಮ ಕೃತಿಗಳನ್ನು ಆಯ್ಕೆ ಮಾಡಿಕೊಂಡು ಬಾಲ ವಿಕಾಸ ಅಕಾಡೆಮಿ ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿಸಿ ಉಚಿತವಾಗಿ ವಿತರಿಸುವ ಯೋಜನೆ ರೂಪಿಸಬೇಕು ಎಂದು ಅವರು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂದರಾ ಭೂಪತಿ ಮಾತನಾಡಿ, ಮಕ್ಕಳು ನಮ್ಮ ಸಾಮರಸ್ಯದ ಬದುಕಿಗೆ ಸಾಕ್ಷಿಯಾಗಿದ್ದಾರೆ. ಗ್ರಾಮೀಣ ಭಾಗದ ಮಕ್ಕಳ ಉತ್ತಮ ವ್ಯಕ್ತಿತ್ವ, ಸ್ವತಂತ್ರವಾಗಿ ಆಲೋಚಿಸುವ ಗುಣ ಬೆಳೆಸುವ ದೃಷ್ಟಿಯಿಂದ ಅಕಾಡೆಮಿ ಗಮನಹರಿಸಿರುವುದು ಉತ್ತಮ ಕಾರ್ಯ ಎಂದರು.
ಬಾಲವಿಕಾಸ ಅಕಾಡೆಮಿಯು ಪ್ರತಿ ತಾಲೂಕು, ಹೋಬಳಿ ಮಟ್ಟದಲ್ಲಿ ಬಾಲವೇದಿಕೆ ರಚಿಸುವ ಮೂಲಕ ಅವರ ಚರ್ಚೆ, ಆಲೋಚನೆಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕು. ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಬಾಲಕಿ ಮೇಲೆ ನಡೆದಿರುವ ಅತ್ಯಾಚಾರ, ದೌರ್ಜನ್ಯ ಎಸಗಿದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಆಗ್ರಸಿದರು.
ಸಮಾರಂಭದಲ್ಲಿ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಧಾರವಾಡ ಕೆಎಂಎಫ್ ಅಧ್ಯಕ್ಷ ನೀಲಕಂಠ ಅಸೂಟಿ, ಶಂಕರ ಹಲಗತ್ತಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ, ಅನೀಲ ದೇಸಾಯಿ, ಕಾರ್ಯಕಾರಿ ಸಮಿತಿ ಸದಸ್ಯರು, ಯೋಜನಾಧಿಕಾರಿ ಮಲ್ಲಿಕಾರ್ಜುನ ಮಾಳಿಗೇರ, ಹಿರಿಯ ಸಾಹಿತಿಗಳು ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.







