‘ಕುಡ್ಸೆಂಪ್’ ಮಂಗಳೂರಿನ ಅತಿ ದೊಡ್ಡ ಹಗರಣ: ಮುನೀರ್ ಕಾಟಿಪಳ್ಳ
ಉನ್ನತ ಮಟ್ಟದ ತನಿಖೆಗೆ ಸಿಪಿಎಂ, ಡಿವೈಎಫ್ಐ ಆಗ್ರಹ

ಮಂಗಳೂರು, ಡಿ.22: ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ಸಾಲ ಪಡೆದು 2002ರಲ್ಲಿ ಆರಂಭಿಸಿದ ಕುಡ್ಸೆಂಪ್ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರ ಮಂಗಳೂರಿನ ನಗರ ಪಾಲಿಕೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವಾಗಿದೆ. ನಗರ ಪಾಲಿಕೆಯ ನೂರಾರು ಕೋ.ರೂ. ಮೊತ್ತದ ಈ ಹಗರಣದಲ್ಲಿ ಭ್ರಷ್ಟ ಅಧಿಕಾರಿಗಳು, ಗುತ್ತಿಗೆದಾರರು, ಕನ್ಸಲ್ಟೆಂಟ್ ಕಂಪೆನಿಗಳು ಜೊತೆ ಸೇರಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಹಾಗಾಗಿ ರಾಜ್ಯ ಸರಕಾರ ತಕ್ಷಣ ಈ ಹಗರಣದ ತನಿಖೆಗೆ ಉನ್ನತ ತನಿಖಾ ತಂಡ ರಚಿಸಬೇಕು, ತಪ್ಪಿತಸ್ಥರಿಂದ ಹಣವನ್ನು ದಂಡ ಸಹಿತ ವಾಪಸ್ ಪಡೆಯಬೇಕು. ಈಗ ನಡೆಯುತ್ತಿರುವ 2ನೆ ಹಂತದ ಎಡಿಬಿ ಯೋಜನೆಯಿಂದ ಈ ಎಲ್ಲ ಅಧಿಕಾರಿಗಳು, ಗುತ್ತಿಗೆದಾರರು, ಕನ್ಸಲ್ಟೆಂಟ್ ಕಂಪೆನಿಗಳನ್ನು ಹೊರಗಿಟ್ಟು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸಿಪಿಎಂ ಮತ್ತು ಡಿವೈಎಫ್‌ಐ ಆಗ್ರಹಿಸಿದೆ.
ಶುಕ್ರವಾರ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಡಿಬಿಯಿಂದ ಸಾಲ ಪಡೆದ ಸುಮಾರು 360 ಕೋ.ರೂ.ಗಳನ್ನು ಸುರತ್ಕಲ್, ಕಾವೂರು, ಬಜಾಲ್ ಸಹಿತ ಮನಪಾಕ್ಕೆ ಹೊಸದಾಗಿ ಸೇರ್ಪಡೆಗೊಂಡ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮೀಸಲಿರಿಸಿ ಕುಡ್ಸೆಂಪ್ ಯೋಜನೆಯನ್ನು ರೂಪಿಸಲಾಗಿತ್ತು. ನಗರ ಪಾಲಿಕೆ, ಕೆಯುಡಿಎಫ್‌ಸಿ ಅಧಿಕಾರಿಗಳ ಬೇಜವಾಬ್ದಾರಿ, ಭ್ರಷ್ಟತೆ, ಗುತ್ತಿಗೆದಾರರು ಮತ್ತು ಕನ್ಸೆಲ್ಟಂಟ್ ಕಂಪೆನಿಗಳ ಧನದಾಹದಿಂದ 13 ವರ್ಷಗಳ ಧೀರ್ಘ ಅವಧಿಗೆ ನಡೆದ ಒಳಚರಂಡಿ ಕಾಮಗಾರಿಯನ್ನು 2016ರಲ್ಲಿ ನಾಗರಿಕರ ಬಳಕೆಗೆ ಬಿಟ್ಟುಕೊಟ್ಟಾಗ ಸೋರಿಕೆ ಕಂಡು ಬಂತಲ್ಲದೆ ಕುಡಿಯುವ ನೀರಿನ ಮೂಲಗಳಿಗೆ ಹರಿದು ಜನರು ಬಳಸದಂತಾಯಿತು ಎಂದು ಆರೋಪಿಸಿದರು.
ಎಡಿಬಿ ಬ್ಯಾಂಕ್‌ನ ಷರತ್ತುಗಳ ಪ್ರಕಾರ ಈಗ ನಗರಪಾಲಿಕೆಯು ಸಾಲ ಮತ್ತು ಬಡ್ಡಿಯ ಕಂತುಗಳನ್ನು ಪಾವತಿಸುತ್ತಿದೆ. ಷರತ್ತುಗಳ ಅನ್ವಯ ಹೆಚ್ಚುವರಿ ಸಂಪನ್ಮೂಲಗಳ ಕ್ರೋಡೀಕರಣಕ್ಕಾಗಿ ಕುಡಿಯುವ ನೀರಿನ ಭಾಗಶಃ ಖಾಸಗೀಕರಣ, ಸಾರ್ವಜನಿಕ ನಳ್ಳಿಗಳ ಸಂಪರ್ಕ ಕಡಿತ, ಸ್ವಯಂಘೋಷಿತ ಆಸ್ತಿ ತೆರಿಗೆಗಳು ಈ ಅವಧಿಯಲ್ಲಿ ಜಾರಿಗೆ ಬಂದಿವೆ. ಆದರೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸುರತ್ಕಲ್, ಕಾವೂರು ಭಾಗದಲ್ಲಿ ಜನ ಒಳಚರಂಡಿ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮನೆಗಳ ತ್ಯಾಜ್ಯ ನೀರನ್ನು ಇಂಗಿಸಲಾಗದೆ ತೆರೆದ ತೋಡುಗಳಿಗೆ ಬಿಡುವಂತಾಗಿ, ಹಲವು ರೀತಿಯ ಗಂಭೀರ ಸಮಸ್ಯೆಗಳು ಸೃಷ್ಟಿಯಾಗಿವೆ. ಈ ಭಾಗದಲ್ಲಿ ಬಹುಮಹಡಿ ವಸತಿ ಸಂಕೀರ್ಣ, ವಾಣಿಜ್ಯ ಮಾಲ್‌ಗಳು ನಿರ್ಮಾಣವಾಗುತ್ತಿದ್ದು, ಒಳಚರಂಡಿ ವ್ಯವಸ್ಥೆ ಇಲ್ಲದೆ ಅತಂತ್ರ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ರಾಜ್ಯದ ನಂಬರ್ 2ನೆ ನಗರವಾಗಿ ಬೆಳೆಯುತ್ತಿರುವ ಮಂಗಳೂರಿನ ಬಹುಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಇನ್ನೂ ರೂಪಿಸಲಾಗದಿರುವುದು ನಗರದ ಮಟ್ಟಿಗೆ ನಾಚಿಗೆಗೇಡಿನ ಸ್ಥಿತಿಯಾಗಿದೆ. ಇದಕ್ಕೆಲ್ಲ ಕುಡ್ಸೆಂಪ್ ಪ್ರಥಮ ಹಂತದಲ್ಲಿ ಅಧಿಕಾರಿಗಳ, ಗುತ್ತಿಗೆದಾರರ, ಕನ್ಸಲ್ಟೆಂಟ್‌ಗಳ ಅಕ್ರಮ ಕೂಟ ನಡೆಸಿದ ಭ್ರಷ್ಟಾಚಾರವೇ ಕಾರಣವಾಗಿದೆ. ಇಷ್ಟೆಲ್ಲಾ ಆದರೂ ಕೂಡ ಶಾಸಕರಾದ ಮೊಯ್ದಿನ್ ಬಾವಾ ಮತ್ತು ಜೆ.ಆರ್. ಲೋಬೊ ಧ್ವನಿ ಎತ್ತದೆ ಮೌನವಾಗಿರುವುದು ಖಂಡನೀಯ ಹಾಗೂ ಹಗರಣದಲ್ಲಿ ಅವರ ಪಾತ್ರದ ಬಗ್ಗೆ ಸಂಶಯಿಸುವಂತಾಗಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಎಡಿಬಿ 2ನೆ ಹಂತದ ಸಾಲ ಯೋಜಯಡಿ ಮತ್ತೆ 100 ಕೋ.ರೂ.ವನ್ನು ತಿರುವೈಲ್, ಅಂಗರಗುಂಡಿ, ಕುಡುಂಬೂರು ಗ್ರಾಮಗಳ ಒಳಚರಂಡಿ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಇದರಲ್ಲಿ ಹಳೆಯ ಗುತ್ತಿಗೆದಾರ, ಕನ್ಸಲ್ಟೆಂಟ್‌ಗಳು ನುಸುಳಿಕೊಂಡಿರುವುದು ಆಘಾತಕಾರಿ ಅಂಶವಾಗಿದೆ. ಅದಲ್ಲದೆ ಈ ಯೋಜನೆಯ ಒಳಚರಂಡಿಯ ದುರಸ್ತಿಗಾಗಿ ಅಮೃತ್ ಯೋಜನೆಯಡಿ 56 ಕೋ. ರೂ. ಮಂಜೂರಾಗಿದ್ದು ಇದರ ಮೇಲುಸ್ತುವಾರಿಯನ್ನೂ ಕೂಡ ಅಕ್ರಮವಾಗಿ ಹಳೆಯ, ಅದೇ ಕಳಂಕಿತ ಕನ್ಸಲ್ಟನ್ಸಿ, ಗುತ್ತಿಗೆದಾರರಿಗೆ ದೊರೆತಿದೆ. ಈ ಎಲ್ಲ ಬೆಳವಣಿಗೆಗಳು ಅತ್ಯಂತ ಆತಂಕಕಾರಿಯಾಗಿದ್ದು ಮುಂದಿನ ದಿನಗಳಲ್ಲಿ ಮಂಗಳೂರು ನಗರದಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ಹಾಹಾಕಾರ ಸೃಷ್ಟಿಯಾಗುವ ಭೀತಿ ಮೂಡಿಸಿದೆ. ಕುಡ್ಸೆಂಪ್ ಹಗರಣದ ತನಿಖೆಗೆ ಒತ್ತಾಯಿಸಿ, ಹಗರಣದಲ್ಲಿ ಭಾಗಿಯಾದ ಗುತ್ತಿಗೆದಾರರು, ಕನ್ಸಲ್ಟೆಂಟ್ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ನಗರದ ಎಲ್ಲ ಯೋಜನೆಗಳಿಂದ ಅವರನ್ನು ಹೊರಗಿಡುವಂತೆ ಒತ್ತಾಯಿಸಿ ಕೆಯುಡಿಎಫ್‌ಸಿ ಆಯುಕ್ತ ಎ.ಬಿ. ಇಬ್ರಾಹೀಂ, ನಗರಾಭಿವೃದ್ದಿ ಸಚಿವ ರೋಷನ್ ಬೇಗ್‌ರಿಗೆ ದೂರು ನೀಡಿತ್ತು. ಮೊನ್ನೆ ನಗರಾಭಿವೃದ್ಧಿ ಸಚಿವರು ಯೋಜನೆಯ ಪರಿಶೀಲನೆಗೆ ಆಗಮಿಸಿದಾಗ ಶಾಸಕರು ಕಾಣೆಯಾಗಿರುವುದು ವಿಪರ್ಯಾಸ. ಈ ಬಗ್ಗೆ ಸಚಿವರು ಸಿಐಡಿ ತನಿಖೆಯ ಭರವಸೆ ನೀಡಿದ್ದಾರೆ. ಆದರೆ ಸಿಪಿಎಂ ಮತ್ತು ಡಿವೈಎಫ್‌ಐ ಕೇವಲ ಭರವಸೆಯಿಂದ ಮಾರು ಹೋಗದೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿಪಿಎಂ ನಗರ ಸಮಿತಿ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್ ಉಪಸ್ಥಿತರಿದ್ದರು.







