ವಕ್ಫ್ ಬೋರ್ಡ್ ಆಸ್ತಿ ದುರುಪಯೋಗ ಆರೋಪ: ಕ್ರಮಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗೆ ಸುಹೈಲ್ ಕಂದಕ್ ಮನವಿ

ಮಂಗಳೂರು, ಡಿ.22: ವಕ್ಫ್ ಬೋರ್ಡ್ ಆಸ್ತಿಯ ದುರುಪಯೋಗಕ್ಕೆ ಸಂಬಂಧಿಸಿದಂತೆ ಶೀಘ್ರ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿ ಭಾರತೀಯ ಯುವ ಕಾಂಗ್ರಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ವಕ್ಫ್ ಬೋರ್ಡ್‌ಗೆ ಸಂಬಂಧಿಸಿದಂತೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯವರು ತನಿಖೆ ನಡೆಸಿ ನೀಡಿದ್ದ 8 ಸಾವಿರ ಪುಟಗಳ ವಿಶೇಷ ವರದಿಯನ್ನ್ನು ರಾಜ್ಯ ಸರಕಾರವು ಸದನಗಳಲ್ಲಿ ಮಂಡಿಸದೆ ರದ್ದುಗೊಳಿಸಿದೆ ಎಂದು ಆರೋಪಿಸಿ ಕಳೆದೆರೆಡು ತಿಂಗಳಿನಿಂದ ಜಿಲ್ಲೆಯ ಕೆಲವು ಬಿಜೆಪಿ ನಾಯಕರು ಪದೇ ಪದೇ ಪ್ರಸ್ತಾಪಿಸುವ ಮುಖಾಂತರ ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸಿ, ರಾಜಕೀಯ ಲಾಭವನ್ನು ಪಡೆಯಲು ಹವಣಿಸುತ್ತಿದ್ದಾರೆ. ತಾವು ಈ ಕೂಡಲೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಕ್ಫ್ ಆಸ್ತಿ ದುರುಪಯೋಗವಾದಲ್ಲಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದರೆ.
ಒಂದೆಡೆ ಒತ್ತುವರಿ, ಇನ್ನೊಂದೆಡೆ ಅತೀ ಕಡಿಮೆ ಬೆಲೆಗೆ ವಕ್ಫ್ ಆಸ್ತಿಯ ಮಾರಾಟ ಅಲ್ಲದೆ ಅಲ್ಪ ಬೆಲೆಗೆ ಲೀಸ್ ಮೂಲಕ ಪಡೆದುಕೊಂಡ ವಕ್ಫ್ ಆಸ್ತಿಯನ್ನು ಅದೇ ಚಿಲ್ಲರೆ ಹಣವನ್ನು ಪಾವತಿಸುತ್ತಾ ಅನುಭೋಗಿಸುತ್ತಿರುವ ಪ್ರಭಾವಿಗಳಿಂದ ಮುಸ್ಲಿಮ್ ಸಮಾಜದ ಬಡವರ ಉದ್ಧಾರಕ್ಕಾಗಿ ಇರುವ ವಕ್ಫ್ ಆಸ್ತಿ ದುರ್ಬಳಕೆಯಾಗುತ್ತಿರುವ ಶಂಕೆಯಿದೆ. ಈ ನಿಟ್ಟಿನಲ್ಲಿ ಅತೀ ಶೀಘ್ರದಲ್ಲಿ ಜಿಲ್ಲೆಯ ಸರ್ವಪಕ್ಷಗಳನ್ನೊಳಗೊಂಡ ನಿಯೋಗದೊಂದಿಗೆ ಮುಖ್ಯಮಂತ್ರಿಯನ್ನು ಭೇಟಿಯಾಗಲು ತೀರ್ಮಾನಿಸಲಾಗಿದೆ. ಆದ್ದರಿಂದ ತ್ವರಿತವಾಗಿ ನಾಡಿನಾದ್ಯಂತ ಇರುವ ವಕ್ಫ್ ಆಸ್ತಿಯ ಸರ್ವೆ ಕಾರ್ಯಕ್ಕೆ ಆದೇಶಿಸಿ, ಯಾರಿಂದ ಎಷ್ಟು ವಕ್ಫ್ ಆಸ್ತಿ ಅತಿಕ್ರಮಣವಾಗಿದೆ ಎಂಬ ವರದಿಯನ್ನು ತರಿಸಿಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತಂದು ಬಡವರಿಗೆ ಸೇರುವಂತೆ ಮಾಡಬೇಕಾಗಿ ಮುಖ್ಯಮಂತ್ರಿಗೆ ಮಾಡಿದ ಮನವಿಯಲ್ಲಿ ಸುಹೈಲ್ ಕಂದಕ್ ಆಗ್ರಹಿಸಿದ್ದಾರೆ.







