ಡಿ. 30 ರಂದು ಕಡೂರಿನ ಪರಿವರ್ತನಾ ರ್ಯಾಲಿಗೆ 15 ಸಾವಿರ ಜನರು ಭಾಗಿ : ಬೆಳ್ಳಿಪ್ರಕಾಶ್
ಕಡೂರು, ಡಿ.22: ಕಡೂರು ಪಟ್ಟಣದ ಪಿಯು ಕಾಲೇಜಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಡಿ. 30 ರಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಪರಿವರ್ತನಾ ರ್ಯಾಲಿಗೆ ಸುಮಾರು 15 ಸಾವಿರ ಜನರು ಭಾಗಿಯಾಗಲಿದ್ದಾರೆಂದು ಕಡೂರು ತಾಲ್ಲೂಕು ಬಿಜೆಪಿ ಅಧ್ಯಕ್ಷ ಬೆಳ್ಳಿಪ್ರಕಾಶ್ ತಿಳಿಸಿದರು.
ಅವರು ತಮ್ಮ ಬಿ.ಎ.ಪಿ. ಕಛೇರಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ, ಈ ರ್ಯಾಲಿಯಲ್ಲಿ ಸರಳವಾದ ಮೆರವಣಿಗೆ ಇರಲಿದೆ. ಶ್ರೀ ಬಸವೇಶ್ವರ ವೃತ್ತದಿಂದ ಕಾರ್ಯಕ್ರಮ ನಡೆಯಲಿರುವ ಕ್ರೀಡಾಂಗಣದ ಬೃಹತ್ ವೇದಿಯವರೆಗೆ ಇರಲಿದೆ. ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿಯ ಮೆರವಣಿಗೆ ಸಾಗಲಿದೆ. ಸಖರಾಯಪಟ್ಟಣದಿಂದ ಸಾವಿರಾರು ರ್ಯಾಲಿಯಲ್ಲಿ ಯಡಿಯೂರಪ್ಪ ಇವರನ್ನು ಕರೆತರಲಾಗುವುದು ಎಂದು ಹೇಳಿದರು.
ಈಗಾಗಲೇ ಎಲ್ಲಾ ರೀತಿಯ ಪೂರ್ವಸಿದ್ಧತೆಗಳು ನಡೆದಿವೆ. ಇಡೀ ಪಟ್ಟಣದ ಎಲ್ಲಾ ರಸ್ತೆಗಳ ಎರಡೂ ಬದಿಗಳಲ್ಲಿ ವಿಶೇಷವಾಗಿ ಸಿಂಗಾರಗೊಳಿಸಲಾಗುವುದು. ಈ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ಧವಾಗಲಿದ್ದು, ಸುಮಾರು 10 ಸಾವಿರ ಜನರಿಗೆ ಆಸನಗಳ ವ್ಯವಸ್ಥೆ ಇರಲಿದೆ. ಸ್ಟೇಡಿಯಂ ಮೇಲ್ಗಡೆ ಸುಮಾರು 2000ಕ್ಕೂ ಅಧಿಕ ಜನ ಕೂರಬಹುದಾಗಿದೆ. ಕಾರ್ಯಕ್ರಮಕ್ಕೆ ಬರಲಿರುವ ಜನರಿಗೆ ವಿಶೇಷವಾಗಿ ಊಟದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದರು.
ಬಿ.ಎಸ್. ಯಡಿಯೂರಪ್ಪ ಇವರ ಜೊತೆಯಲ್ಲಿ ಅನಂತಕುಮಾರ್, ಶೋಭ ಕರಂದ್ಲಾಜೆ, ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ, ಅರವಿಂದ ಲಿಂಬಾವಳಿ, ಶ್ರೀರಾಮುಲು, ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಅಲ್ಲದೆ ಇನ್ನೂ ಹಲವಾರು ರಾಜ್ಯ ಬಿ.ಜೆ.ಪಿ. ಮುಖಂಡರುಗಳು ಆಗಮಿಸಲಿದ್ದಾರೆ. ಡಿಸೆಂಬರ್ 30 ರ ಶನಿವಾರ ಸಂಜೆ 6.30ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದು ಹೇಳಿದರು.
ಈ ವೇಳೆ ಮಂಜುನಾಥ್, ಶಂಕರಮೂರ್ತಿ, ಬಿ.ಎಲ್. ಶ್ರೀನಿವಾಸ್, ಜಿಗಣೇಹಳ್ಳಿ ಮಂಜು, ಸಂತೋಷ್, ಸತೀಶ್, ಆನಂದಮೂರ್ತಿ ಉಪಸ್ಥಿತರಿದ್ದರು.







