ಪತ್ನಿ ಅಸೌಖ್ಯದ ಹಿನ್ನೆಲೆ ಚೌಟಾಲಾಗೆ 2 ವಾರ ಪರೋಲ್ ಮಂಜೂರು

ಹೊಸದಿಲ್ಲಿ, ಡಿ.22: ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷ ಜೈಲುಶಿಕ್ಷೆಗೆ ಗುರಿಯಾಗಿರುವ ಐಎನ್‌ಎಲ್‌ಡಿ ಮುಖ್ಯಸ್ಥ , ಹರ್ಯಾಣದ ಮಾಜಿ ಮುಖ್ಯಮಂತ್ರಿ ಒ.ಪಿ.ಚೌಟಾಲಾರಿಗೆ 2 ವಾರಗಳ ಪರೋಲ್ ಅನ್ನು ದಿಲ್ಲಿ ಹೈಕೋರ್ಟ್ ಮಂಜೂರುಗೊಳಿಸಿದೆ.
ಪತ್ನಿ ಅಸೌಖ್ಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿರುವ ಕಾರಣ ಎರಡು ವಾರ ಪರೋಲ್ ಮಂಜೂರುಗೊಳಿಸುವಂತೆ ಚೌಟಾಲಾ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್, 50,000 ರೂ. ಒಳಗೊಂಡಿರುವ ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತದ ಬಾಂಡ್ ಹೊಂದಿರುವ ಇತರ ಎರಡು ಸಾಕ್ಷಿಗಳನ್ನು ಒದಗಿಸಿ ಪರೋಲ್ ಪಡೆಯುವಂತೆ ಸೂಚಿಸಿದೆ. ಅಲ್ಲದೆ ಪರೋಲ್ ಅವಧಿಯಲ್ಲಿ ಯಾವುದೇ ಇತರ ಚಟುವಟಿಕೆಯಲ್ಲಿ ತೊಡಗದಂತೆ ಹಾಗೂ ಸಿರ್ಸಾ ಪಟ್ಟಣ( ಇಲ್ಲಿರುವ ಆಸ್ಪತ್ರೆಯಲ್ಲಿ ಚೌಟಾಲಾ ಪತ್ನಿ ಚಿಕಿತ್ಸೆಗೆ ದಾಖಲಾಗಿದ್ದಾರೆ) ಬಿಟ್ಟು ಹೊರಗೆ ಹೋಗದಂತೆ ಷರತ್ತು ವಿಧಿಸಿದೆ. ಸಿರ್ಸಾ ಆಸ್ಪತ್ರೆಯಿಂದ ನಿಮ್ಮ ಪತ್ನಿಯನ್ನು ಇತರೆಡೆಯ ಆಸ್ಪತ್ರೆಗೆ ಸ್ಥಳಾಂತರಿಸಿದ ಹೊರತು ಸಿರ್ಸಾ ಬಿಟ್ಟು ಹೊರಗೆ ತೆರಳುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.





