ಪೌಷ್ಠಿಕಾಂಶ ಯೋಜನೆಯಡಿ ಆಹಾರ ಪಡೆಯಲು ಮಕ್ಕಳ ಆಧಾರ್ ನೋಂದಣಿ ಕಡ್ಡಾಯ

ಹೊಸದಿಲ್ಲಿ, ಡಿ.22: ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಪೌಷ್ಠಿಕಾಂಶ ಯೋಜನೆಯಡಿ ಆಹಾರ ಪಡೆಯುವ ಮಕ್ಕಳ ಆಧಾರ್ ನೋಂದಣಿ ಅಗತ್ಯವಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವ ವೀರೇಂದ್ರ ಕುಮಾರ್ ಶುಕ್ರವಾರದಂದು ಲೋಕಸಭೆಯಲ್ಲಿ ತಿಳಿಸಿದರು. ಆಧಾರ್ ಅನ್ನು ಸೇವೆ ಅಥವಾ ಲಾಭ ಅಥವಾ ಸಬ್ಸಿಡಿ ಪಡೆಯಲು ಗುರುತಿನ ದಾಖಲೆಯನ್ನಾಗಿ ಬಳಸುವುದರಿಂದ ಸರಕಾರಿ ಹಂಚಿಕಾ ಪ್ರಕ್ರಿಯೆ ಸರಳಗೊಳ್ಳುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಅದರಿಂದ ಪಾರದರ್ಶಕತೆ ಮತ್ತು ಸಮರ್ಪಕತೆ ಮೂಡುತ್ತದೆ ಹಾಗೂ ಫಲಾನುಭವಿಗಳು ಸುಲಭವಾದ ಮತ್ತು ತಡೆಯಿಲ್ಲದ ರೀತಿಯಲ್ಲಿ ತಮ್ಮ ಪಾಲನ್ನು ನೇರವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ತಮ್ಮ ಗುರುತನ್ನು ಸಾಬೀತುಪಡಿಸಲು ಹಲವು ದಾಖಲೆಗಳನ್ನು ನೀಡುವ ಕಿರಿಕಿರಿಯನ್ನು ಆಧಾರ್ ತಪ್ಪಿಸುತ್ತದೆ. ಫಲಾನುಭವಿಗಳಿಗೆ ಆಧಾರ್ ಒಂದು ವಿಶೇಷ ಗುರುತಿನ ಚೀಟಿಯಾಗಿದೆ ಎಂದವರು ವಿವರಿಸಿದರು. ಆಧಾರ್ ಇಲ್ಲದ ಫಲಾನುಭವಿಗಳು ಆಧಾರ್ ಕಾರ್ಡ್ ಪಡೆಯಲು ಕಾರ್ಯಕರ್ತರು ಸಹಾಯ ಮಾಡುವುದಾಗಿ ಹೇಳಿರುವ ಸಚಿವರು ಅಲ್ಲಿಯವರೆಗೆ ಫಲಾನುಭವಿಗಳು ಪರ್ಯಾಯ ಗುರುತಿನ ಚೀಟಿ ಆಧಾರದಲ್ಲಿ ಅಂಗನವಾಡಿಗಳಲ್ಲಿ ಈ ಸೇವೆಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದ ಅಪೌಷ್ಠಿಕ ಸಮಸ್ಯೆಯನ್ನು ಬಗೆಹರಿಸಲು ಸರಕಾರವು 2017-18ರಿಂದ 2019-20ರ ಮೂರು ವರ್ಷಗಳ ಅವಧಿಗೆ ರೂ. 9,046.17 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಪೌಷ್ಠಿಕಾಂಶ ಯೋಜನೆಯನ್ನು ಜಾರಿ ಮಾಡಿತ್ತು. ನಿಗದಿತ ಗುರಿಯನ್ನು ತಲುಪಲು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ಸೆಂಟಿವ್‌ಗಳನ್ನು ನೀಡುವುದು, ವಿವಿಧ ಯೋಜನೆಗಳ ಒಗ್ಗೂಡಿಸುವಿಕೆ, ಐಸಿಡಿಎಸ್ ಮೇಲೆ ಮಾಹಿತಿ ಮತ್ತು ದೂರಸಂಪರ್ಕ ತಂತ್ರಜ್ಞಾನ ಆಧಾರಿತ ನಿಗಾ, ನೀತಿ ಆಯೋಗದಿಂದ ವೌಲ್ಯಮಾಪನ, ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಪೌಷ್ಠಿಕಾಂಶ ಕೇಂದ್ರಗಳ ಸ್ಥಾಪನೆ ಮತ್ತು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ ಪೌಷ್ಠಿಕಾಂಶ ಸಂಪನ್ಮೂಲ ಕೇಂದ್ರಗಳ ಸ್ಥಾಪನೆ ಹೀಗೆ ಹಲವು ಮುಖ್ಯ ಗುರಿಗಳನ್ನು ರಾಷ್ಟ್ರೀಯ ಪೌಷ್ಠಿಕಾಂಶ ಯೋಜನೆ ಹೊಂದಿದೆ.







