ತುರ್ತು ಪರಿಸ್ಥಿತಿ ಸಂದರ್ಭ ಬಂಧನಕ್ಕೊಳಗಾದವರಿಗೆ ಸ್ವಾತಂತ್ರ್ಯ ಹೋರಾಟಗಾರರ ಸ್ಥಾನ!
ಮಹಾರಾಷ್ಟ್ರ ಸರಕಾರದ ಚಿಂತನೆ

ನಾಗ್‌ಪುರ, ಡಿ.22: 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ವಿಧಿಸಿದ್ದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂಧನಕ್ಕೊಳಗಾಗಿ ಜೈಲು ಪಾಲಾದವರಿಗೆ ಸ್ವಾತಂತ್ರ್ಯ ಹೋರಾಟಗಾರರ ಸ್ಥಾನಮಾನ ನೀಡಲು ಸರಕಾರ ಯೋಚಿಸುತ್ತಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶುಕ್ರವಾರ ತಿಳಿಸಿದ್ದಾರೆ.
ಬಿಜೆಪಿ ನಾಯಕ ಏಕನಾಥ ಖಡ್ಸೆ ರಾಜ್ಯ ಶಾಸಕಾಂಗ ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಫಡ್ನವೀಸ್ ಹೊಸ ವರ್ಷದ ಮೊದಲ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರಕಾರವು ಮಹಾರಾಷ್ಟ್ರದ ಪ್ರತಿ ಜಿಲ್ಲೆಯಿಂದಲೂ ಮಾಹಿತಿಯನ್ನು ಕೋರಿರುವುದಾಗಿ ಫಡ್ನವೀಸ್ ತಿಳಿಸಿದ್ದಾರೆ. ದೇಶದಲ್ಲಿ ಆರೇಳು ರಾಜ್ಯಗಳಲ್ಲಿ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು ಈ ಬಗ್ಗೆ ನಾನು ಮಾಹಿತಿ ಕೋರಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಇದಕ್ಕೂ ಮುನ್ನ, ದೇಶದ ಸ್ವಾತಂತ್ರಕ್ಕೆ ಹೋರಾಟ ಮಾಡಿದ ಮಾದರಿಯಲ್ಲೇ ತುರ್ತುಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಅನೇಕ ಜನರು ಹೋರಾಡಿದ್ದಾರೆ ಎಂದು ತಿಳಿಸಿದ್ದರು. ಹಾಗಾಗಿ ಅವರಿಗೂ ಸ್ವಾತಂತ್ರ್ಯ ಹೋರಾಟಗಾರರ ಸ್ಥಾನಮಾನ ನೀಡಬೇಕೆಂದು ಅವರು ಆಗ್ರಹಿಸಿದ್ದರು.





