ಮಹಾದಾಯಿ ನದಿ ನೀರು ಹಂಚಿಕೆ ವಿವಾದ: ಗೋವಾ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು, ಡಿ.22: ಮಹಾದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳ(ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ) ಮುಖ್ಯಮಂತ್ರಿಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಮಹಾದಾಯಿ ಕಣಿವೆಯ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಮುಖ್ಯಮಂತ್ರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸುವ ಸಂಬಂಧ ಪ್ರಸಕ್ತ ಸಾಲಿನ ಮೇ 24ರಂದು ತಮಗೆ ಪತ್ರ ಬರೆದಿದ್ದೆ. ಅಲ್ಲದೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೂ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ನಿಮ್ಮ ಕಡೆಯಿಂದ ಯಾವುದೆ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಡಿ.20ರಂದು ತಾವು ಮಹಾದಾಯಿ ವಿಚಾರದಲ್ಲಿ ವೈಯಕ್ತಿಕ ಪತ್ರ ಬರೆದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೆ, ಪತ್ರದ ಪ್ರತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.ನನ್ನ ಪತ್ರಕ್ಕೂ ಉತ್ತರ ನೀಡಿ ಎನ್ನುವ ಮೂಲಕ ಯಡಿಯೂರಪ್ಪಗೆ ಪತ್ರ ಬರೆದ ಮನೋಹರ್ ಪಾರಿಕ್ಕರ್ ನಡೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ, ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕೆಂಬುದು ನಮ್ಮ ನಿಲುವು. 2016ರ ಸೆ.1ರಂದು ಮಹಾದಾಯಿ ನ್ಯಾಯಾಧೀಕರಣದ ನ್ಯಾಯಮೂರ್ತಿಗಳು ಇದೇ ಸಲಹೆ ನೀಡಿದ್ದಾರೆ ಎಂಬುದನ್ನು ಉಲ್ಲೇಖಿಸಿದ್ದಾರೆ.
ಮಹಾದಾಯಿ ಕಣಿವೆಯ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ಸೇರುವಂತೆ ಮತ್ತೆ ಮನವಿ ಮಾಡುತ್ತೇನೆ. ನಿಮ್ಮ ಅನುಕೂಲಕ್ಕೆ ತಕ್ಕ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಿ, ಬೆಂಗಳೂರಿನಲ್ಲಿ ಅಥವಾ ನಿಮಗೆ ಅನುಕೂಲಕರವಾಗಿರುವ ಸ್ಥಳದಲ್ಲಿ ಸಭೆ ನಿಗದಿಪಡಿಸಿ, ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳೋಣ ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿಗೂ ಈ ಬೇಡಿಕೆಯನ್ನು ಸಲ್ಲಿಸಲಾಗುವುದು. ನ್ಯಾಯಾಧೀಕರಣವು ನ.30ರಂದು ಹೊರಡಿಸಿರುವ ಆದೇಶದಲ್ಲಿ ಅಂತಿಮ ವಿಚಾರಣೆಯನ್ನು 2018ನೆ ಸಾಲಿನ ಫೆಬ್ರವರಿ 6 ರಿಂದ 22ರವರೆಗೆ ನಡೆಸುವುದಾಗಿ ತಿಳಿಸಿದೆ. ಆದುದರಿಂದ, ಅತ್ಯಂತ ತುರ್ತಾಗಿ ಈ ವಿಚಾರವನ್ನು ಚರ್ಚೆ ನಡೆಸಬೇಕಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
7.56 ಟಿಎಂಸಿ ನೀರು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಹಾಗೂ 7 ಟಿಎಂಸಿ ನೀರನ್ನು ಮಲಪ್ರಭಾ ಕಣಿವೆಯಲ್ಲಿರುವ ಬರಪೀಡಿತ ಪ್ರದೇಶಗಳಿಗೆ ಪೂರೈಸಲು ಕರ್ನಾಟಕ ಸರಕಾರವು 14.98 ಟಿಎಂಸಿ ನೀರಿಗಾಗಿ ಬೇಡಿಕೆ ಇಟ್ಟಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.







