ದಾದಿಯರಿಗೆ ನೀಡುವ ಸಂಭಾವನೆ ಸಮಸ್ಯೆ ನಿಯಂತ್ರಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಹೊಸದಿಲ್ಲಿ, ಡಿ.22: ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ದಾದಿಯರಿಗೆ ನೀಡುವ ಸಂಭಾವನೆಯ ಸಮಸ್ಯೆಯನ್ನು ನಿಯಂತ್ರಿಸುವಂತೆ ಕೇಂದ್ರವು ಎಲ್ಲ ರಾಜ್ಯ ಸರಕಾರಗಳಿಗೆ ಸೂಚಿಸಿದೆ.
ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳಲ್ಲಿ ದುಡಿಯುವ ದಾದಿಯರಿಗೆ ಉತ್ತಮ ವೇತನ ನೀಡಲು ಅಗತ್ಯವಿರುವ ಕ್ರಮವನ್ನು ತೆಗೆದುಕೊಳ್ಳಲು ಅಗತ್ಯವಿರುವ ಸಲಹೆ ಸೂಚನೆಗಳನ್ನು ಎಲ್ಲಾ ಮುಖ್ಯಮಂತ್ರಿಗಳಿಗೆ ಕಳುಹಿಸಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಖಾಸಗಿ ಸಂಸ್ಥೆಗಳು ಅನಿಯಂತ್ರಿತವಾಗಿ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ರಾಜ್ಯ ಸರಕಾರಗಳು ಅಗತ್ಯಬಿದ್ದರೆ ಈ ಕ್ಷೇತ್ರವನ್ನು ನಿಯಂತ್ರಿಸಲು ಸೂಕ್ತ ಶಾಸನವನ್ನು ತರಬೇಕು ಎಂದು ನಡ್ಡಾ ತಿಳಿಸಿದ್ದಾರೆ. ಏಳನೇ ಕೇಂದ್ರ ವೇತನ ಮಂಡಳಿಯ ವರದಿ ಪ್ರಕಾರ ವೇತನ ಮತ್ತು ಭತ್ತೆಯನ್ನು ಪರಿಷ್ಕರಿಸುವಂತೆ ಅಖಿಲ ಭಾರತ ಸರಕಾರಿ ದಾದಿಯರ ಒಕ್ಕೂಟದಿಂದ ಸರಕಾರಕ್ಕೆ ಮನವಿ ಬಂದಿರುವುದಾಗಿ ಸಚಿವರು ತಿಳಿಸಿದ್ದಾರೆ. ಸರಕಾರವು ಅವರ ಬೇಡಿಕೆಗಳ ಜೊತೆಗೆ ಇತರ ಸಂಘಟನೆಗಳ ಬೇಡಿಕೆಗಳನ್ನೂ ಪರಿಶೀಲಿಸಿದೆ. ಮಂಡಳಿಯ ಕನಿಷ್ಟ ವೇತನ, ವೇತನ ಶ್ರೇಣಿ ಹಾಗೂ ಇತರ ಸಲಹೆಗಳನ್ನು ಸರಕಾರ ಒಪ್ಪಿಕೊಂಡಿದೆ ಎಂದು ನಡ್ಡಾ ತಿಳಿಸಿದ್ದಾರೆ. ಭತ್ತೆಗೆ ಸಂಬಂಧಪಟ್ಟ ಸಲಹೆಗಳನ್ನು ಪರಿಶೀಲಿಸಲು ವಿತ್ತ ಕಾರ್ಯದರ್ಶಿ, ಕಾರ್ಯದರ್ಶಿ (ವೆಚ್ಚ), ಮತ್ತು ಗೃಹ, ರಕ್ಷಣಾ, ಆರೋಗ್ಯ, ಅಂಚೆ ಮತ್ತು ರೈಲ್ವೇ ಮಂಡಳಿಯ ಮುಖ್ಯಸ್ಥರು ಸದಸ್ಯರಾಗಿರುವ ಸಮರ್ಥ ಸಮಿತಿಗೆ ಒಪ್ಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.





