ತಂಬಾಕು ಉತ್ಪನ್ನಗಳ ಮೇಲೆ ಚಿತ್ರಾತ್ಮಕ ಸಂದೇಶ
ಹೈಕೋರ್ಟ್ ಆದೇಶವನ್ನು ತಡೆಹಿಡಿಯಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಡಿ.22: ತಂಬಾಕು ಉ ಉತ್ಪನ್ನಗಳ ಮೇಲೆ ಹಾಕಲಾಗುವ ಚಿತ್ರಾತ್ಮಕ ಎಚ್ಚರಿಕೆಯ ಸಂದೇಶಗಳು ಪ್ಯಾಕೆಟ್‌ನ ಶೇಕಡಾ 85 ಭಾಗವನ್ನು ಆವರಿಸಿರಬೇಕು ಎಂಬ ಸರಕಾರದ ನಿಯಮವನ್ನು ತಳ್ಳಿಹಾಕಿರುವ ಕರ್ನಾಟಕ ಉಚ್ಛನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿದೆ.
ತೀರ್ಪನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸುವಂತೆ ಉಚ್ಛನ್ಯಾಯಾಲಯಕ್ಕೆ ಸೂಚಿಸಿರುವ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠ ಈ ಬಗ್ಗೆ ಮೇಲ್ಮನವಿಯ ವಿಚಾರಣೆಯನ್ನು ಮುಂದಿನ ವರ್ಷ ಜನವರಿ ಎಂಟಕ್ಕೆ ಮುಂದೂಡಿದೆ.
ತಂಬಾಕು ಉತ್ಪನ್ನಗಳ ಪ್ಯಾಕೆಟ್ ಮೇಲೆ ಶೇಕಡಾ 85 ಚಿತ್ರಾತ್ಮಕ ಎಚ್ಚರಿಕೆ ಸಂದೇಶವನ್ನು ಹಾಕಬೇಕು ಎಂಬ ಸರಕಾರದ 2014ರ ಕಾನೂನು ತಿದ್ದುಪಡಿಯನ್ನು ಅದು ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂಬ ನೆಲೆಯಲ್ಲಿ ಕರ್ನಾಟಕ ಉಚ್ಛನ್ಯಾಯಾಲಯ ತಿರಸ್ಕರಿಸಿತ್ತು. ಉಚ್ಛ ನ್ಯಾಯಾಲಯದ ತೀರ್ಪಿನ ವಿರುದ್ಧ ಸರಕಾರೇತರ ಸಂಸ್ಥೆ ಹೆಲ್ತ್ ಫೋರ್ ಮಿಲಿಯನ್ಸ್ ಸೇರಿದಂತೆ ಹಲವು ಸಂಸ್ಥೆಗಳು ಮತ್ತು ಜನರು ಮೇಲ್ಮನವಿ ಸಲ್ಲಿಸಿದ್ದರು.







